ಶಿವಾಜಿ ಪ್ರತಿಮೆ ಕುಸಿತ ಎಫ್‌ಐಆರ್ ದಾಖಲು
ಮುಂಬೈ,ಅ.೨೭- ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೫ ಅಡಿ ಎತ್ತರದ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಜೈದೀಪ್ ಆಪ್ಟೆ ಮತ್ತು ಮೂರ್ತಿ ರಚನೆ ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಿಂಧುದುರ್ಗ ಪೊಲೀಸರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪತನದ ಪ್ರಕರಣದಲ್ಲಿ, ಗುತ್ತಿಗೆದಾರ ಜೈದೀಪ್ ಆಪ್ಟೆ ಮತ್ತು ರಚನಾ ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ಸ್ಥಳೀಯ ಪೊಲೀಸರು ಎಫ್‌ಐಆರ್ ಸೆಕ್ಷನ್ ೧೦೯, ೧೧೦, ೧೨೫, ೩೧೮, ಮತ್ತು ೩( ೫) ಭಾರತೀಯ ನ್ಯಾಯ ಸಂಹಿತೆಯ ಪ್ರಕರಣ ದಾಖಲು ಮಾಡಲಾಗಿದೆ ಎಂದಿದ್ದಾರೆ.
ಪ್ರತಿಮೆಯ ನಿರ್ಮಾಣವು ಕಳಪೆ ಗುಣಮಟ್ಟದ್ದಾಗಿದೆ ಮತ್ತು ರಚನೆಯಲ್ಲಿ ಬಳಸಲಾದ ನಟ್ ಮತ್ತು ಬೋಲ್ಟ್‌ಗಳು ತುಕ್ಕು ಹಿಡಿದಿವೆ ಎಂದು ಆರೋಪಿಸಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ನೀಡಿದ ದೂರಿನ ನಂತರ ಎಫ್‌ಐಆರ್ ದಾಖಲು ಮಾಡಲಾಗಿದೆ.
ಎಂಟು ತಿಂಗಳ ಹಿಂದೆ ನೌಕಾಪಡೆಯ ದಿನದಂದು ನಾಗರಿಕರಿಗೆ ಸಮರ್ಪಿಸಲಾಗಿದ್ದ ಪ್ರತಿಮೆ ಇದೀಗ ಕುಸಿತ ಬಿದ್ದು ಭಾರೀ ಸುದ್ದಿಯಾಗಿದೆ. ಭಾರತೀಯ ನೌಕಾಪಡೆ ಸೋಮವಾರ ಹೇಳಿಕೆ ನೀಡಿದ್ದು, ಘಟನೆಯ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.
ಬಲವಾದ ಗಾಳಿಯಿಂದಾಗಿ ಪ್ರತಿಮೆಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ ಸರ್ಕಾರವು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ನೀಡಲಾಗುವುದು ಮತ್ತು ಮಹಾರಾಷ್ಟ್ರ ಸರಕಾರ ಅದೇ ಸ್ಥಳದಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಶಿಂಧೆ ಅವರ ಸೂಚನೆ ಮೇರೆಗೆ ಲೋಕೋಪಯೋಗಿ ಸಚಿವ ರವೀಂದ್ರ ಚವ್ಹಾಣ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರತಿಮೆ ಪತನಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲಿದ್ದಾರೆ. ಭಾರತೀಯ ನೌಕಾಪಡೆಯು ಪ್ರತಿಮೆಯ ಮರುಸ್ಥಾಪನೆ ಮತ್ತು ಈ ವಿಷಯದ ತನಿಖೆಯಲ್ಲಿ ಸಹಕಾರವನ್ನು ಭರವಸೆ ನೀಡಿದೆ. ಈ ಪ್ರತಿಮೆಯನ್ನು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ೪ ಡಿಸೆಂಬರ್ ೨೦೨೩ ರಂದು ಮಹಾರಾಷ್ಟ್ರದ ಸಿಂಧುದುರ್ಗದ ರಾಜ್‌ಕೋಟ್ ಕೋಟೆಯಲ್ಲಿ ಅನಾವರಣಗೊಳಿಸಿದ್ದಾರೆ.