ಉಕ್ರೇನ್-ರಷ್ಯಾ ಯುದ್ಧ ತಡೆಗೆ ಬೈಡನ್-ಮೋದಿ ಚರ್ಚೆ
ನವದೆಹಲಿ/ ವಾಷಿಂಗ್ಟನ್,ಆ,೨೭- ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದದ ಪರಿಸ್ಥಿತಿ ಅದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಅಮೆರಿಕಾ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ದ ನಿಲ್ಲಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಸಂಗತಿಯನ್ನು ಅಧ್ಯಕ್ಷರ ಜೊತೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.
ಯುದ್ದದಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಬದಲಾಗಿ ಶಾಂತಿ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. “ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆ ಪರಿಹರಿಸಲಾಗುದು ಎಂದು ಒತ್ತಿ ಹೇಳಿದ್ದಾರೆ.
ದೂರವಾಣಿ ಮಾತುಕತೆಯ ವೇಳೆ ಭಾರತ-ಅಮೆರಿಕಾ ನಡುವಿನ ಸ್ನೇಹ ಸಂಬಂಧ ಮತ್ತು ರಾಜತಾಂತ್ರಿಕ ವಿಷಯಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯು ಕುರಿತು ಚರ್ಚೆ ನಡೆಸಲಾಗಿದೆ.ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರಳುವಿಕೆಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಜೋ ಬೈಡೆನ್ ಅವರ ಪ್ರತಿಕ್ರಿಯೆಯ ಬಗ್ಗೆ ಕೇಳಿದಾಗ, ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ಯುದ್ಧವನ್ನು ಕೊನೆಗೊಳಿಸುವಲ್ಲಿ ಝೆಲೆನ್ಸ್ಕಿಯ ದೃಷ್ಟಿಕೋನವನ್ನು ಆಲಿಸುವ ಎಲ್ಲಾ ದೇಶಗಳನ್ನು ಅಮೆರಿಕಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ
ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ತಮ್ಮ ನಿರಂತರ ಬೆಂಬಲವನ್ನು ದೃಢಪಡಿಸಿದ್ದಾರೆ.ಫೆಬ್ರವರಿ ೨೦೨೨ ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ರಶಿಯಾ ವಶಪಡಿಸಿಕೊಂಡ ಎಲ್ಲಾ ಪ್ರದೇಶಗಳನ್ನು ಹಿಂದಿರುಗಿಸಲು ಝೆಲೆನ್ಸ್ಕಿ ಕರೆ ನೀಡಿದ್ದಾರೆ.