ಹಿರಿಯ ಕಾಂಗ್ರೆಸ್ ನಾಯಕ ಚವಾಣ್ ನಿಧನ
ಹೈದರಾಬಾದ್,ಅ.೨೬-ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾಂದೇಡ್ ಲೋಕಸಭಾ ಕ್ಷೇತ್ರದ ಸಂಸದ ವಸಂತರಾವ್ ಚವಾಣ್ ಇಂದು ನಿಧನರಾಗಿದ್ದಾರೆ. ಅವರಿಗೆ ೮೨ ವಯಸ್ಸಾಗಿತ್ತು .
ಕಳೆದ ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಹೈದರಾಬಾದ್‌ನ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬಹಳ ಸಮಯದಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು ಎನ್ನಲಾಗಿದೆ.
ಅವರ ಅಂತಿಮ ಸಂಸ್ಕಾರವನ್ನು ನಾಂದೇಡ್‌ನಲ್ಲಿ ನಡೆಸಲಾಗುವುದು ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ತಿಳಿಸಿದೆ.
೨೦೦೯ ರಲ್ಲಿ ನೈಗಾಂವ್ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸುವ ಮೂಲಕ ವಸಂತ್ ಚವಾಣ್ ಅವರು ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಯನ್ನು ತಲುಪಿದರು. ಈ ಚುನಾವಣೆಯಲ್ಲಿ ಸ್ವತಂತ್ರ ನಾಯಕರಾಗಿ ಸ್ಪರ್ಧಿಸಿದ್ದರು. ಇದಾದ ನಂತರ ಅವರ ರಾಜಕೀಯ ಗ್ರಾಫ್ ಏರುತ್ತಲೇ ಇತ್ತು. ಅವರು ಸೆಪ್ಟೆಂಬರ್ ೨೦೧೪ ರಲ್ಲಿ ಕಾಂಗ್ರೆಸ್ ಸೇರಿದರು ಮತ್ತು ಪಕ್ಷಕ್ಕೆ ಸೇರುವ ಮೊದಲು ಮೇ ತಿಂಗಳಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೇಮಕಗೊಂಡರು.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ನಾಂದೇಡ್ ಲೋಕಸಭಾ ಕ್ಷೇತ್ರದ ಸಂಸದ ವಸಂತರಾವ್ ಚವಾಣ್ ಅವರ ನಿಧನದ ಸುದ್ದಿ ಅತ್ಯಂತ ಆಘಾತಕಾರಿ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸದಾ ನಿಷ್ಠರಾಗಿ ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಮನೆಮನೆಗೆ ಕೊಂಡೊಯ್ಯುತ್ತಿದ್ದರು. ಈ ದುಃಖದಲ್ಲಿ ಇಡೀ ಕಾಂಗ್ರೆಸ್ ಪಕ್ಷ ಚವಾಣ್ ಕುಟುಂಬದ ಜೊತೆಗಿದೆ ಎಂದು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.