ಅರ್ಹತೆಯಿಲ್ಲದವರಿಗೆ ಗುತ್ತಿಗೆ ವಿರುದ್ಧ ಕಾನೂನು ಹೋರಾಟ
ಬೆಂಗಳೂರು, ಆ.೨೬-ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಅರ್ಹತೆಯೇ ಇಲ್ಲದ ಪೂರ್ವ ನಿಗದಿತ ಗುತ್ತಿಗೆದಾರರಿಗೆ ೩೮೦ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯ ಗುತ್ತಿಗೆಯನ್ನು ನೀಡಲು ಮುಂದಾಗಿರುವ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಕಾನೂನು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ನಾಯಕ ಎನ್.ಆರ್.ರಮೇಶ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈಯ್ಯಪ್ಪನಹಳ್ಳಿ ಜಂಕ್ಷನ್ ಬಳಿ ನಿರ್ಮಿಸಲು ಉದ್ದೇಶಿಸಿರುವ ೪ ಕಿ. ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು ೩೮೦ ಕೋಟಿ ರೂಪಾಯಿಗಳಷ್ಟು ಹಣವನ್ನು ಪಾಲಿಕೆಯು ವೆಚ್ಛ ಮಾಡುತ್ತಿದೆ. ಈ ಸಂಬಂಧ ಈ ಹಿಂದೆ ಆಹ್ವಾನಿಸಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಕಟ್ಟಡ ನಿರ್ಮಾಣ ಸಂಸ್ಥೆ ಆರ್ ಎನ್ ಎಸ್ ಕಾನೂನು ರೀತ್ಯಾ ಅರ್ಹತೆಯನ್ನು ಪಡೆದಿದ್ದರೂ ಸಹ ಅವರನ್ನು ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಮಾಡಿ ಕೇವಲ ಬೆಂಗಳೂರು ಮಹಾನಗರ ಮಾತ್ರವಲ್ಲದೇ ದೇಶದ ಯಾವುದೇ ಭಾಗದಲ್ಲಿ ಒಂದು ಇಂಚಿನಷ್ಟೂ ಎಲಿವೇಟೆಡ್ ಕಾರಿಡಾರ್ ರಸ್ತೆ ಅಥವಾ ಸೇತುವೆ ಕಾಮಗಾರಿಯನ್ನು ನಿರ್ವಹಿಸಿರುವ ಅನುಭವವೇ ಇಲ್ಲದ ಸ್ಟಾರ್ ಇನ್ಫ್ ಟೆಚ್ ಎಂಬ ಸಂಸ್ಥೆಗೆ ಇಷ್ಟು ಬೃಹತ್ ಮೊತ್ತದ ಕಾಮಗಾರಿಯನ್ನು ನೀಡಲು ಹೊರಟಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಬೃಹತ್ ಪ್ರಮಾಣದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಗುತ್ತಿಗೆದಾರರು ಆಯಾ ಕಾಮಗಾರಿಗೆ ಸಂಬಂಧಿಸಿದಂತೆ ತಮ್ಮ ಅನುಭವದ ಪ್ರಮಾಣ ಪತ್ರವನ್ನು ಹಾಗೂ ಈ ಹಿಂದೆ ಅವರು ಅದೇ ಮಾದರಿಯ ಕಾಮಗಾರಿ ಯನ್ನು ನಿರ್ವಹಿಸಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿರುವುದು ಕಡ್ಡಾಯವಾಗಿರುತ್ತದೆ.
ಹಾಗಿದ್ದಾಗ್ಯೂ ಸಹ ಎಲಿವೇಟೆಡ್ ಕಾರಿಡಾರ್ ರಸ್ತೆ ಅಥವಾ ಸೇತುವೆ ನಿರ್ಮಾಣದಲ್ಲಿ ನಯಾ ಪೈಸೆ ಅನುಭವ ಇಲ್ಲದ ಈ ಸಂಸ್ಥೆಗೆ ೩೮೦ ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದ ಗುತ್ತಿಗೆಯನ್ನು ಕೊಡಲು ಹೊರಟಿರುವ ಇದರ ಹಿಂದಿನ ಮರ್ಮವೇನು ? ಇದರ ಹಿಂದೆ ಇರುವ ಪ್ರಭಾವಿಗಳು ಯಾರು ಎಂದು ಕೇಳಿದ್ದಾರೆ.ಈ ಕಾಮಗಾರಿಯ ಗುತ್ತಿಗೆಯನ್ನು ಸ್ಟಾರ್ ಇನ್ಫ್ ಟೆಚ್ ನೀಡಿದ್ದೇ ಆದಲ್ಲಿ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ತನಿಖಾ ಸಂಸ್ಥೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.