ಜೋಗ ಜಲಪಾತ ವೀಕ್ಷಣೆಗೆ ದರ ದುಬಾರಿ
ಶಿವಮೊಗ್ಗ.ಆ.೨೬- ರಾಜ್ಯದ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಜಲಪಾತ ವೀಕ್ಷಿಸಲು ಪ್ರವಾಸಿಗರು ಮುಗಿಬಿದ್ದಿದ್ದಾರೆ. ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ದರ ಹೆಚ್ಚಿಸಲಾಗಿದೆ.
ದರ ಹೆಚ್ಚಳ ಮಾಡಿರುವ ಕ್ರಮಕ್ಕೆ ಪ್ರವಾಸಿಗರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಕೃತಿದತ್ತವಾಗಿರುವ ಜಲಪಾತಕ್ಕೆ ಏಕೆ ದುಬಾರಿ ಶುಲ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೋಗದಲ್ಲಿ ಈ ಹಿಂದೆ ಇದ್ದ ದರಕ್ಕಿಂತ ಶೇ.೩೦ರಿಂದ ಶೇ.೫೦ಕ್ಕೆ ಏರಿಸಲಾಗಿದೆ. ಈ ಹಿಂದೆ ಬಸ್‌ಗೆ ೧೫೦ ರೂ. ನಿಗದಿ ಮಾಡಲಾಗಿತ್ತು ಇದೀಗ ೨೦ಕ್ಕೆ ಏರಿಸಲಾಗಿದೆ. ಕಾರಿಗೆ ೫೦ ರೂ. ಇದೀಗ ೮೦ ರೂ. ನಿಗದಿ ಮಾಡಲಾಗಿದೆ.
ಒಬ್ಬ ಪ್ರವಾಸಿಗನಿಗೆ ಇದ್ದ ೧೦ ರೂ. ಶುಲ್ಕ ಇದೀಗ ೨೦ರೂ,ಗೆ ಏರಿಸಲಾಗಿದೆ. ಶುಲ್ಕ ಏರಿಕೆ ಮಾಡಿರುವ ಕುರಿತು ಜೋಗ ನಿರ್ವಹಣಾ ಪ್ರಾಧಿಕಾರ ಫಲಕವನ್ನು ಅಳವಡಿಸಿದೆ.
ಜೋಗ ಜಲಪಾತ ವೀಕ್ಷಣೆ ದರ ಮಾತ್ರವಲ್ಲದೇ ಪಾರ್ಕಿಂಗ್‌ಗೆ ದರವನ್ನು ಏರಿಸಲಾಗಿದೆ. ಪ್ರವಾಸಿಗರಿಗೆ ಜಲಪಾತ ವೀಕ್ಷಣೆಯನ್ನು ಕೇವಲ ೨ ಗಂಟೆಗಳಿಗೆ ಸೀಮಿತಗೊಳಿಸಲಾಗಿದೆ. ಈ ಹಿಂದೆ ರಮಣೀಯ ದೃಶ್ಯಗಳನ್ನು ಗಂಟೆಗಟ್ಟಲೆ ನಿಂತು ಎಲ್ಲಾ ಆಯಾಮಗಳಿಂದಲೂ ನೋಡಿ ಪೋಟೋ ತೆಗೆಸಿಕೊಂಡು ಸಂತಸ ಪಡುತ್ತಿದ್ದರು. ಆದರೆ ಇದೀಗ ಕೇವಲ ೨ ಗಂಟೆ ನಿಗದಿ ಪಡಿಸಿದ್ದು ಪ್ರವಾಸಿಗರಿಗೆ ಬೇಸರ ತರಿಸಿದೆ.
ಜೋಗ ಜಲಪಾತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಆಗಿಲ್ಲ. ಶುಲ್ಕ ದರ ಹೆಚ್ಚಿಸಿ ಫಲಕವನ್ನು ಅಳವಡಿಸಿದ್ದಾರೆ. ಜೋಗ ಜಲಪಾತದ ಸ್ಥಳ ಅಭಿವೃದ್ಧಿ ಪಡಿಸದೇ ಶುಲ್ಕ ಹೆಚ್ಚಳ ಮಾಡಿರುವುದಕ್ಕೆ ಪ್ರವಾಸಿಗರು ಕಿಡಿಕಾರಿದ್ದಾರೆ. ಕೂಡಲೇ ಸಂಸದ ಬಿ.ಎಸ್.ರಾಘವೇಂದ್ರ ಈ ಬಗ್ಗೆ ಕ್ರಮ ತಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.