ಕ್ರಿಕೆಟ್ ಬದುಕಿಗೆ ಶಿಖರ್ ಧವನ್ ವಿದಾಯ
ನವದೆಹಲಿ.ಆ.೨೪- ಟೀಮ್ ಇಂಡಿಯಾ ಪರ ಆಡುವುದು ನನ್ನ ಕನಸಾಗಿತ್ತು ಅದು ನೆರವೇರಿದ್ದು ಇದೀಗ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ಭಾರತ ಕ್ರಿಕೆಟ್ ತಂಡ ಆಟಗಾರ ಶಿಖರ್ ಧವನ್ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಶಿಖರ್ ಧವನ್ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಧವನ್ ಭಾರತ ತಂಡದ ಪರ ೩೪ ಟೆಸ್ಟ್, ೧೬೭ ಏಕದಿನ ಮತ್ತು ೬೮ ಟಿ೨೦ ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಸಿ ಕ್ರಿಕೆಟ್‌ಗೂ ವಿದಾಯ ಹೇಳಿದರು.
ಭಾರತ ತಂಡದ ಪರ ಆಡಬೇಕೆನ್ನುವ ಕನಸು ಹೊಂದಿದ್ದೆ ಅದು ಈಡೇರಿದೆ. ನನ್ನ ವೃತ್ತಿಜೀವನಕ್ಕೆ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಮೊದಲನೆಯದಾಗಿ ಕುಟುಂಬಕ್ಕೆ, ನನ್ನ ಬಾಲ್ಯದ ಜೀವನದ ಕೋಚ್ ದಿವಂಗತ ತಾರಕ್ ಸಿಂಗ್ ಮತ್ತು ಮದನ್ ಶರ್ಮಾ ಅವರುಗಳ ನೆರವಿನಿಂದ ಕ್ರಿಕೆಟ್ ಕಲಿತೆ. ದೀರ್ಘ ಕಾಲದವರೆಗೆ ಆಡಲು ಅವಕಾಶ ಕೊಟ್ಟ ನನ್ನ ತಂಡಕ್ಕೂ ಕೂಡ ಧನ್ಯವಾದ ಹೇಳುತ್ತೇನೆ.
ಅಭಿಮಾನಿಗಳು ಕೂಡ ನನ್ನ ಕುಟುಂಬ ಅವರಿಂದ ನನಗೆ ಹೆಸರು, ಖ್ಯಾತಿ ಮತ್ತು ಪ್ರೀತಿ ಎಲ್ಲವೂ ಸಿಕ್ಕಿದೆ.ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತ ಘೋಷಿಸುತ್ತಿದ್ದೇನೆ. ನಿವೃತ್ತಿ ಘೋಷಿಸಿರುವ ಸಂದರ್ಭದಲ್ಲಿ ಶಾಂತವಾಗಿದ್ದೇನೆ. ಬಿಸಿಸಿಐ ಮತ್ತು ದೆಹಲಿ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಹೇಳುತ್ತಿದ್ದೇನೆ.
ನಾನಿನ್ನು ಭಾರತ ತಂಡವನ್ನು ಪ್ರತಿನಿಧಿಸುವುದಿಲ್ಲ ಆದರೆ ದೀರ್ಘ ಕಾಲದವರೆಗೆ ಆಡಿದಕ್ಕೆ ಸಂತಸವಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.
ಧವನ್ ೨೦೧೦ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ೯ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೧೦ ಸಾವಿರ ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ೧೭ ಶತಕ, ಟೆಸ್ಟ್ ನಲ್ಲಿ ೭ ಶತಕ ಸೇರಿ ಒಟ್ಟು ೨೪ ಶತಕ ಹೊಡೆದಿದ್ದಾರೆ. ಧೋನಿ ನೇತೃತ್ವದ ಭಾರತ ತಂಡದಲ್ಲಿ ಶಿಖರ್ ಧವನ್ ತಂಡದ ಪ್ರಮುಖ ಆಟಗಾರರಾಗಿದ್ದರು. ಧವನ್ ೨೦೧೩ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ತಂಡದ ಭಾಗವಾಗಿದ್ದರು. ಟೂರ್ನಿಯಲ್ಲಿ ೫ ಪಂದ್ಯಗಳಿಂದ ೨ ಶತಕ, ೧ ಅರ್ಧ ಶತಕ ಸೇರಿ ೩೬೩ ರನ್ ೯೦.೭೫ ಸರಾಸರಿ ಹೊಂದಿದ್ದರು.
೩೪ ಟೆಸ್ಟ್ ಪಂದ್ಯ ೨೩೧೫ ರನ್, ೧೬೭ ಏಕದಿನ ಪಂದ್ಯ ೬೭೯೩ ರನ್ ಮತ್ತು ೬೮ ಟಿ೨೦ ಪಂದ್ಯ ೧೭೫೯ ರನ್ ಗಳಿಸಿದ್ದಾರೆ.