ಕೆರೆಗೆ ಹಾರಿ ಅತ್ಯಾಚಾರಿ ಆರೋಪಿ ಸಾವು
ಗುವಾಹಟಿ, ಆ. ೨೪- ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಪೊಲೀಸರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ, ಮೃತಪಟ್ಟಿದ್ದಾನೆ. ಈ ಘಟನೆ ಅಸ್ಸಾಂ ನಗೋನ್ ಜಿಲ್ಲೆಯ ದಿಗಿಂನಲ್ಲಿ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ನಿನ್ನೆ ಬಂಧಿಸಲಾಗಿತ್ತು. ಪ್ರಕರಣ ಮರುಸೃಷ್ಠಿಸುವ ಸಲುವಾಗಿ ಇಂದು ಮುಂಜಾನೆ ೩.೩೦ಕ್ಕೆ ಪೊಲೀಸರು ಆರೋಪಿಯನ್ನು ಘಟನಾಸ್ಥಳಕ್ಕೆ ಕರೆದು ಹೋಗಿದ್ದರು.
ಈ ಸಂದರ್ಭದಲ್ಲಿ ತಪ್ಪಿಸಿಕೊಂಡ ಆರೋಪಿ ಏಕಾಏಕಿ ಕೆರೆಗೆ ಹಾರಿದ್ದಾನೆ. ಆತನ ಪತ್ತೆಗೆ ೨ ತಾಸುಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
೧೪ ವರ್ಷದ ಬಾಲಕಿ ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಆಕೆಯನ್ನು ಸುತ್ತುವರಿದು ಆಕೆಯ ಮೇಲೆ ಅತ್ಯಾಚಾರ ನಡೆಸಿದರು. ಈ ಘಟನೆ ಗುರುವಾರ ಸಂಭವಿಸಿತ್ತು.
ಗಾಯಗೊಂಡು ಪ್ರಜ್ಞೆ ತಪ್ಪಿದ ಬಾಲಕಿ ಕೆರೆ ಸಮೀಪ ಬಿದ್ದಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿತ್ತು. ಮತ್ತೊಬ್ಬನನ್ನು ವಶಕ್ಕೆ ಪಡೆದು ಮೂರನೇ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದರು.