ಹೊಟೇಲ್‌ಗೆ ಬೆಂಕಿ ೯ಮಂದಿ ಸಜೀವ ದಹನ
ಸೋಲ್,ಆ.೨೩- ದಕ್ಷಿಣ ಕೊರಿಯಾದ ಬುಚಿಯೋನ್ ನಗರದ ಹೊಟೇಲ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘದಲ್ಲಿ ಕನಿಷ್ಠ ೯ ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ಈ ವೇಳೆ ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ೩ ಜನರ ಸ್ಥಿತಿ ಚಿಂತಾಜನಕವಾಗಿದೆ ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬುಚಿಯೋನ್‌ನ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಕಿಮ್ ಇನ್-ಜೇ ಹೇಳಿದ್ದಾರೆ. ಗಾಯಾಳುಗಳನ್ನು ಸಮೀಪದ ಆರು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡಾಗ ಒಂಬತ್ತು ಅಂತಸ್ತಿನ ಹೋಟೆಲ್‌ನಲ್ಲಿ ೨೩ ಅತಿಥಿಗಳು ತಂಗಿದ್ದರು ಎಂದು ಬುಚಿಯೋನ್‌ನ ಅಗ್ನಿಶಾಮಕ ಠಾಣೆಯ ಅಧಿಕಾರಿ ಲೀ ಸಾಂಗ್-ಡಾನ್ ಹೇಳಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಎಂಟನೇ ಮಹಡಿಯಿಂದ ಹರಡಿದ ಬೆಂಕಿಯನ್ನು ಬಹುತೇಕ ಹತೋಟಿಗೆ ತರಲಾಗಿದೆ
ಆದರೆ ಗಾಯಗೊಂಡ ಮತ್ತು ಸತ್ತವರ ಸಂಖ್ಯೆ ಹೆಚ್ಚಾಗಬಹುದು ಎಂದು ಲಿ ಹೇಳಿದ್ದಾರೆ.
ಕಟ್ಟಡದಲ್ಲಿರುವ ಇತರರಿಗಾಗಿ ಶೋಧ ಮುಂದುವರಿದಿದೆ
ತುರ್ತು ಸೇವೆಗಳ ಸಿಬ್ಬಂದಿ ಕಟ್ಟಡದಲ್ಲಿರುವ ಜನರನ್ನು ಹುಡುಕುತ್ತಿದ್ದಾರೆ ಎಂದು ಲೀ ತಿಳಿಸಿದ್ದಾರೆ. ಹಾಲ್ ಮತ್ತು ಮೆಟ್ಟಿಲುಗಳ ಮೇಲೆ ಶವಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ತನಿಖೆ ನಡೆಸಲಾಗುತ್ತಿದೆ. ಬೆಂಕಿ ನಂದಿಸಲು ೧೫೦ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಹಾಗೂ ೪೬ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.
ಕಳೆದ ಜೂನ್ ೨೫ ರಂದು, ರಾಜಧಾನಿ ಸಿಯೋಲ್ ಬಳಿಯ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ೨೨ ಜನರು ಸಾವನ್ನಪ್ಪಿದ್ದಾರೆ, ಹೆಚ್ಚಾಗಿ ಚೀನೀ ವಲಸೆ ಕಾರ್ಮಿಕರು. ಸಿಯೋಲ್‌ನ ದಕ್ಷಿಣ ಪ್ರದೇಶದ ಹ್ವಾಸೋಂಗ್ ನಗರದಲ್ಲಿ ಈ ಅಪಘಾತ ಸಂಭವಿಸಿದೆ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ೧೦೦ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು.