67 ಭಾರತೀಯರು ಸ್ವದೇಶಕ್ಕೆ ವಾಪಸ್
ನಾಮ್ ಪೆನ್ (ಕಾಂಬೋಡಿಯಾ) ,ಅ.೩- ಕಾಂಬೋಡಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯು ಕಾಂಬೋಡಿಯಾದ ಆಂತರಿಕ ಸಚಿವಾಲಯದ ಸಹಯೋಗದೊಂದಿಗೆ ಮೋಸದ ಉದ್ಯೋಗ ಹಗರಣಗಳಲ್ಲಿ ಸಿಕ್ಕಿಬಿದ್ದ ಭಾರತೀಯ ೬೭ ಪ್ರಜೆಗಳನ್ನು ಯಶಸ್ವಿಯಾಗಿ ರಕ್ಷಿಸಿ ಸ್ವದೇಶಕ್ಕೆ ಕಳುಹಿಸಿದೆ. ಉದ್ಯೋಗಾಕಾಂಕ್ಷಿಗಳಿಗೆ ನಕಲಿ ಏಜೆಂಟ್‌ರಗಳ ಬಗ್ಗೆ ಎಚ್ಚರವಿರುವಂತೆ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ.
ಇತ್ತೀಚಿನ ಪ್ರಕರಣದಲ್ಲಿ, ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪೊಲೀಸರ ಸಹಾಯದಿಂದ ೬೭ ಭಾರತೀಯರನ್ನು ರಕ್ಷಿಸಿದೆ.
ಇಲ್ಲಿಯವರೆಗೆ, ೧೫ ನಾಗರಿಕರು ಸೆಪ್ಟೆಂಬರ್ ೩೦ ರಂದು ಭಾರತಕ್ಕೆ ಮರಳಿದ್ದಾರೆ ಮತ್ತು ೨೪ ಜನರು ಅಕ್ಟೋಬರ್ ೧ ರಂದು ಮರಳಿದ್ದಾರೆ. ಉಳಿದ ೨೮ ಮಂದಿ ಮುಂದಿನ ದಿನಗಳಲ್ಲಿ ಮರಳುವ ನಿರೀಕ್ಷೆಯಿದೆ.ರಾಯಭಾರ ಕಚೇರಿಯು ಈ ಭಾರತೀಯ ನಾಗರಿಕರನ್ನು ಕಾಂಬೋಡಿಯಾ ಪೊಲೀಸರ ಸಹಾಯದಿಂದ ಪ್ರತ್ಯೇಕ ಬ್ಯಾಚ್‌ಗಳಲ್ಲಿ ಭಾರತಕ್ಕೆ ಕಳುಹಿಸುತ್ತಿದೆ.
ಉದ್ಯೋಗ ಮತ್ತು ಉತ್ತಮ ಸಂಬಳದ ಹೆಸರಿನಲ್ಲಿ ಕೆಲವು ಭಾರತೀಯ ಯುವಕರು ವಂಚನೆಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ರಾಯಭಾರ ಕಚೇರಿಗೆ ಸಿಕ್ಕಿದೆ.
ಏಜೆಂಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ಕಾಂಬೋಡಿಯಾ ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವಾಗ ಭಾರತೀಯ ನಾಗರಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಭಾರತೀಯ ಪ್ರಜೆಗಳು ಸಹಾಯಕ್ಕಾಗಿ ರಾಯಭಾರ ಕಚೇರಿಯನ್ನು +೮೫೫೯೨೮೮೧೬೭೬ ಅಥವಾ ಇಮೇಲ್ cons.phnompenh@mea.gov.in ನಲ್ಲಿ ಸಂಪರ್ಕಿಸಬಹುದು. ಕಾಂಬೋಡಿಯನ್ ಹಾಟ್‌ಲೈನ್ +೮೫೫೯೨೬೮೬೯೬೯ ನಲ್ಲಿಯೂ ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ.
ಜನವರಿ ೨೦೨೨ ರಿಂದ, ಕಾಂಬೋಡಿಯನ್ ಅಧಿಕಾರಿಗಳ ಸಹಕಾರದೊಂದಿಗೆ ರಾಯಭಾರ ಕಚೇರಿಯು ೨೦೨೪ ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಸುಮಾರು ೭೭೦ ಸೇರಿದಂತೆ ೧,೦೦೦ ಕ್ಕೂ ಹೆಚ್ಚು ಭಾರತೀಯ ಪ್ರಜೆಗಳಿಗೆ ಮರಳಲು ಅನುಕೂಲ ಮಾಡಿಕೊಟ್ಟಿದೆ.