ಸುರೇಖಾ ಹೇಳಿಕೆಗೆ ರಾಜಮೌಳಿ ಕಿಡಿ
ಹೈದ್ರಾಬಾದ್.ಅ.೪- ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಕಾರಣ ಎಂದು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ನೀಡಿರುವ ಹೇಳಿಕೆಗೆ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಕಿಡಿಕಾರಿದ್ದಾರೆ.
ಕೊಂಡಾ ಸುರೇಖಾ ಅವರ ಹೇಳಿಕೆಯನ್ನು ಚಿತ್ರರಂಗ ಸಹಿಸಿಕೊಳ್ಳುವುದಿಲ್ಲ ಎಂದು #ತೆಲುಗು ಚಿತ್ರರಂಗ ಸಹಿಸುವುದಿಲ್ಲ ಎಂಬ ಅಭಿಯಾನ ಬೆಂಬಲಿಸಿದ್ದಾರೆ.
ಅವರವರ ಗಡಿಗಳನ್ನು ಗೌರವಿಸಿ, ಘನತೆಯಿಂದ ವರ್ತಿಸಿ. ಆಧಾರವಿಲ್ಲದ ಆರೋಪಗಳು ಸಹಿಸಲಸಾಧ್ಯ. ಅದರಲ್ಲೂ ಸಾರ್ವಜನಿಕ ಸೇವೆಯಲ್ಲಿರುವವರು ಈ ರೀತಿ ಆರೋಪ ಮಾಡಿದಾಗಂತೂ ಹೇಗೆ ಸಹಿಸಬೇಕು ಎಂದು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಿದರೂ ಈ ವಿಚಾರ ಸದ್ಯ ಟಾಲಿವುಡ್ ಹಾಗೂ ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.ಏತನ್ಮಧ್ಯೆ ನಾಗಾರ್ಜುನ ಅವರು ಕೊಂಡಾ ಸುರೇಖಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಸ್ ದಾಖಲಿಸಿದ್ದಾರೆ.
ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಮಾತನಾಡಿರುವ ಸಮಂತಾ ಅವರು, ‘ನಮ್ಮ ವಿಚ್ಛೇದನವು ವೈಯಕ್ತಿಕ ವಿಷಯವಾಗಿದೆ. ಅದರ ಬಗ್ಗೆ ಇಂತಹ ಊಹಾಪೋಹದಿಂದ ದೂರವಿರುವಂತೆ ನಾನು ವಿನಂತಿಸುತ್ತೇನೆ. ನಮ್ಮ ನಿರ್ಧಾರ ಪರಸ್ಪರ ಒಪ್ಪಿಗೆಯಿಂದ ಮತ್ತು ಸೌಹಾರ್ದತೆಯಿಂದ ಕೂಡಿತ್ತು. ಯಾವುದೇ ರಾಜಕೀಯ ಪಿತೂರಿಗಳನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.