ಲಡ್ಡು ತನಿಖೆಗೆ ಎಸ್‌ಐಟಿ
ನವದೆಹಲಿ,ಅ.೪- ಆಂಧ್ರಪ್ರದೇಶದಲ್ಲಿ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಗುಣಮಟ್ಟವಿಲ್ಲದ ತುಪ್ಪ ಬಳಸಿದೆ ಎಂಬ ಆರೋಪ ಕುರಿತು ಸಿಬಿಐ ಮೇಲ್ವಿಚಾರಣೆಯಲ್ಲಿ ಐವರು ಸದಸ್ಯರ ಸ್ವತಂತ್ರ ತಂಡ ರಚಿಸುವಂತೆ ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
ಎಸ್‌ಐಟಿಯಲ್ಲಿ ಸಿಬಿಐನ ಇಬ್ಬರು, ಮತ್ತು ಇಬ್ಬರು ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ-ಎಫ್‌ಎಸ್‌ಎಸ್‌ಎಐ ಒಬ್ಬ ಸದಸ್ಯರನ್ನು ಒಳಗೊಂಡಿದೆ.
ಸ್ವತಂತ್ರ ತನಿಖೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದೆ.
ತಿರುಪತಿ ಲಡ್ಡು ವಿಷಯದ ಆರೋಪಗಳು ವಿಶ್ವಾದ್ಯಂತ ಜನರ ಭಾವನೆಗಳಿಗೆ ಧಕ್ಕೆ ತರುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಎಸ್‌ಐಟಿ ತನಿಖೆಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡಲಿದ್ದಾರೆ “ಕೋಟ್ಯಂತರ ಜನರ ಭಾವನೆಗಳನ್ನು ತಣಿಸುವ ಸಲುವಾಗಿ, ಪ್ರತಿನಿಧಿಯನ್ನು ಒಳಗೊಂಡಿರುವ ಸ್ವತಂತ್ರ ಎಸ್‌ಐಟಿಯ ತನಿಖೆ ಸಮಗ್ರ ಮಾಹಿತಿ ನೀಡುವಂತೆ ನಿರ್ದೇಶಿಸಿದೆ
ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಎಸ್‌ಐಟಿ ಸದಸ್ಯರ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತತೆಯ ಪ್ರತಿಬಿಂಬದಂತೆ ಅರ್ಥೈಸಬಾರದು ದೇವರಲ್ಲಿ ನಂಬಿಕೆ ಹೊಂದಿರುವ ಕೋಟ್ಯಂತರ ಜನರ ಭಾವನೆಗಳನ್ನು ತಣಿಸಲು ಸಮಿತಿಯನ್ನು ರಚಿಸಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಲಡ್ಡು ವಿಷಯದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳ ಅರ್ಹತೆಯ ಬಗ್ಗೆ ಯಾವುದೇ ಹೇಳಿಕೆ ಮಾಡುವುದನ್ನು ತಡೆಯಲು ಸುಪ್ರೀಂ ಕೋರ್ಟ್, ನ್ಯಾಯಾಲಯವನ್ನು “ರಾಜಕೀಯ ಯುದ್ಧಭೂಮಿ” ಯಾಗಿ ಬಳಸಲು ಅನುಮತಿಸುವುದಿಲ್ಲ ಎಂದು ತಾಕೀತು ಮಾಡಿದೆ.
ಕಳೆದ ತಿಂಗಳು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ, ಹಿಂದಿನ ವೈಎಸ್‌ಆರ್‍ಸಿಪಿ ಸರ್ಕಾರದ ಆಡಳಿತದಲ್ಲಿ ಲಡ್ಡುಗಳನ್ನು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಕಂಡುಬಂದಿದೆ ಎಂದು ಹೇಳಿಕೊಂಡ ನಂತರ ವಿವಾದ ಭುಗಿಲೆದ್ದಿತು.
ವಿಚಾರಣೆ ವೇಳೆ ಆಂಧ್ರಪ್ರದೇಶ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಕಪಿಲ್ ಸಿಬಲ್ ನಡುವೆ ತೀವ್ರ ವಾಗ್ವಾದ ನಡೆಯಿತು.
ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಗೆ ಅವಕಾಶ ನೀಡಬೇಕು ಎಂದು ಮುಕುಲ್ ರೋಹಟಗಿ ಹೇಳಿದರು. “ನ್ಯಾಯಾಲಯದ ಆಯ್ಕೆಯ ಯಾವುದೇ ಅಧಿಕಾರಿ ಸೇರಿಸಬಹುದು. ಎಸ್‌ಐಟಿ ವಿರುದ್ಧ ಯಾವುದೇ ಆರೋಪ ಇರುವಂತಿಲ್ಲ. ಕೆಲವು ಪತ್ರಿಕೆಗಳ ವರದಿಗೆ ನಾವು ಹೋಗಲಾಗುವುದಿಲ್ಲ” ಎಂದು ವಾದ ಮಂಡಿಸಿದ್ದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆಗಳು ಪಕ್ಷಪಾತಕ್ಕೆ ಧಕ್ಕೆ ತಂದಿದ್ದು, ಸ್ವತಂತ್ರ ಸಂಸ್ಥೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.
ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಏಕೆಂದರೆ ಪ್ರಯೋಗಾಲಯದ ಪ್ರಾಥಮಿಕ ವರದಿಯು ತುಪ್ಪದ ಮಾದರಿಗಳಲ್ಲಿ ಕಲ್ಮಶಗಳು ಪತ್ತೆಯಾಗಿದೆ ಎಂದು ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ಹೇಳಿಕೆಗಳ ನಂತರ, ರಾಜ್ಯ ಸರ್ಕಾರ ರಚಿಸಿದ್ದ ಎಸ್‌ಐಟಿ ಈ ವಾರದ ಆರಂಭದಲ್ಲಿ ತನ್ನ ತನಿಖೆಯನ್ನು ಸ್ಥಗಿತಗೊಳಿಸಿತ್ತು.
ತನಿಖೆಗೆ ಸಿಎಂ ಸ್ವಾಗತ
ತಿರುಪತಿ ಲಡ್ಡು ವಿಚಾರಣೆಗೆ ಸುಪ್ರೀಂಕೋರ್ಟ್ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಯಬೇಕು ಎನ್ನುವ ಆದೇಶವನ್ನು ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ವಾಗತಿಸಿದ್ದಾರೆ.
ಸುಪ್ರೀಂಕೋರ್ಟ್ ಕ್ರಮ ಸ್ವಾಗತಾರ್ಹ. ಸತ್ಯ ಮೇವ ಜಯತೆ , ನಮೋ ವೆಂಕಟೇಶಾಯ ನಮಃ ಎಂದು ಟ್ವೀಟ್ ಮಾಡಿದ್ದಾರೆ