ಕ್ಷಮೆ ಕೋರಿದ ಸಚಿವೆ ಸುರೇಖಾ
ಹೈದರಾಬಾದ್,ಅ.೩-ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ನಟಿ ಸಮಂತಾ-ನಾಗ ಚೈತನ್ಯ ವಿಚ್ಛೇದನದ ಕುರಿತು ನೀಡಿದ ಹೇಳಿಕೆಗೆ ತೆಲಂಗಾಣ ಸಚಿವೆ ಕೊಂಡ ಸುರೇಖಾ ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆಯುವುದಾಗಿಯೂ ಸಚಿವೆ ಸುರೇಖಾ ಹೇಳಿದ್ದಾರೆ.
ತೆಲಂಗಾಣ ರಾಜ್ಯ ಸಚಿವೆ ಕೊಂಡಾ ಸುರೇಖಾ ಅವರು ರಾಜಕೀಯ ಹಸ್ತಕ್ಷೇಪದಿಂದಲೇ ತೆರೆಕಂಡ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.ಅವರ ಈ ಹೇಳಿಕೆ ಕುರಿತಂತೆ ಕಾನೂನು ಕ್ರಮಕ್ಕೆ ಹಲವರು ಮುಂದಾಗಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ರಾಜಕೀಯ ಪಯಣದಲ್ಲಿ ರಾಜಕೀಯ ಲಾಭಕ್ಕಾಗಿ ಯಾರ ಕೌಟುಂಬಿಕ ಸಮಸ್ಯೆ ಅಥವಾ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆಸಿಲ್ಲ.
ನಾನು ಸಮಂತಾ ಮತ್ತು ಅವರ ಕುಟುಂಬವನ್ನು ಅವಹೇಳನ ಮಾಡುತ್ತಿಲ್ಲ. ನಾನು ಎಂದಿಗೂ ಆಧಾರರಹಿತ ಆರೋಪ ಮಾಡುವುದಿಲ್ಲ. ನನ್ನ ಮಾತು ಮತ್ತು ಅಭಿಪ್ರಾಯ ನಿಮಗೆ ನೋವಾಗಿದ್ದರೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದಿದ್ದಾರೆ.
ಸಚಿವೆ ಕೊಂಡು ಸುರೇಖಾ ಅವರ ಹೇಳಿಕೆಯನ್ನು ನಾಗಾರ್ಜುನ ಸೇರಿದಂತೆ ನಾಗ ಚೈತನ್ಯ ಕುಟುಂಬ ತೀವ್ರವಾಗಿ ಖಂಡಿಸಿದೆ. ನಟಿ ಸಮಂತಾ ಕೂಡ ತಮ್ಮ ವಿಚ್ಛೇದನ ಪರಸ್ಪರ ಸಮ್ಮತಿಯ ಮೇರೆಗೆ ನಡೆದಿದೆ ಮತ್ತು ಇದರಲ್ಲಿ ಯಾವುದೇ ರಾಜಕೀಯ ಪಿತೂರಿ ಇಲ್ಲ ಎಂದು ಹೇಳಿದ್ದಾರೆ. ದಯವಿಟ್ಟು ರಾಜಕೀಯಕ್ಕೆ ತನ್ನ ಹೆಸರನ್ನು ಎಳೆದು ತರಬೇಡಿ ಮತ್ತು ನಾನು ಯಾವಾಗಲೂ ರಾಜಕೀಯದಿಂದ ದೂರವಿರುತ್ತೇನೆ ಎಂದು ಅವರು ಹೇಳಿದ್ದಾರೆ.