ಮೂವರು ಕನ್ನಗಳ್ಳರ ಸೆರೆ 50 ಲಕ್ಷ ಮಾಲು ಜಪ್ತಿ
ಬೆಂಗಳೂರು, ಆ.೨೩-ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕನ್ನಗಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಬೊಮ್ಮನಹಳ್ಳಿ ಪೊಲೀಸರು ವಿದೇಶಿ ಕರೆನ್ಸಿ,೬೭೪ ಗ್ರಾಂ ಚಿನ್ನ, ೨೪೦ ಗ್ರಾಂ ಬೆಳ್ಳಿ ಸೇರಿ ೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಆಡುಗೋಡಿಯ ಅಪ್ಪು ಅಲಿಯಾಸ್ ಕೋಳಾಯಿ(೩೪)ತಮಿಳುನಾಡಿನ ಧರ್ಮಪುರಿಯ ಪೆರಿಯಸ್ವಾನಿ(೪೨)ಹಾಗೂ ಥಾಮರಿ ಸೆಲ್ವನ್ (೨೯)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.
ಬಂಧಿತರಿಂದ ಇಂಗ್ಲೆಂಡ್, ಅಮೇರಿಕಾ, ಆಸ್ಟ್ರೇಲಿಯಾ, ಮಲೇಶಿಯಾ, ವಿಯಟ್ನಾಂ, ಸಿಂಗಾಪುರದ ಕರೆನ್ಸಿಗಳು ೬೭೪ ಗ್ರಾಂ ಚಿನ್ನ, ೨೪೦ ಗ್ರಾಂ ಬೆಳ್ಳಿ ಸೇರಿ ೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿನ ಒಂಟಿ ಮನೆಯೊಂದಕ್ಕೆ ಬೀಗ ಹಾಕಿ ಬೆಳಗ್ಗೆ ಕೆಲಸಕ್ಕೆಂದು ಹೊರಗೆ ಹೋಗಿ ರಾತ್ರಿ ೯ಕ್ಕೆ ವಾಪಸ್ ಬಂದು ಮನೆಯ ಮುಂಬಾಗಿಲು ಮುರಿದು ಒಳನುಗ್ಗಿ, ಬೀರುವಿನಲ್ಲಿದ್ದ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳನ್ನು ಹಾಗೂ ವಿದೇಶಿ ಕರೆನ್ಸಿಯನ್ನು ಕಳವು ಮಾಡಿದ್ದ ಪ್ರಕರಣವು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ವಿವಿಧ ಕೈಗೊಂಡು, ಮಾಹಿತಿಯನ್ನು ಕಲೆಹಾಕಿ,ಅಡುಗೋಡಿಯ ರಾಜೇಂದ್ರನಗರ ಮುಖ್ಯರಸ್ತೆಯಲ್ಲಿ ಅಪ್ಪು ಅಲಿಯಾಸ್ ಕೋಳಾಯಿ ಯನ್ನು ಬಂಧಿಸಲಾಯಿತು.
ಆತನಿಂದ ೬೦ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಹೆಚ್ಚಿನ ವಿಚಾರಣೆ ನಡೆಸಿ ಆತ ನೀಡಿದ ಮಾಹಿತಿ ಮೇರೆಗೆ ಆತನ ವಾಸದ ಮನೆಯ ಪಕ್ಕದಲ್ಲಿದ್ದ ಒಂದು ಪೆಟ್ಟಿಗೆಯಿಂದ ಕಳುವು ಮಾಡಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಹಾಗೂ ವಿದೇಶಿ ಕರೆನ್ಸಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯು ಆತನ ಸಂಬಂಧಿಕನಿಗೆ ಹಾಗೂ ಸ್ನೇಹಿತನೊರ್ವನಿಗೆ ಕಳವು ಮಾಡಿದ ಚಿನ್ನಾಭರಣಗಳ ಪೈಕಿ ೩೪ ಗ್ರಾಂ ಚಿನ್ನದ ಒಡವೆಗಳನ್ನು ಧರ್ಮಪುರಿಯಲ್ಲಿ ವಶಕ್ಕೆ ಪಡೆದು ಮತ್ತಿಬ್ಬರನ್ನು ಬಂಧಿಸಿ೮ ಗ್ರಾಂ ತೂಕದ ಚಿನ್ನದ ಒಡವೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಅಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತೆ ಸಾರಾ ಫಾತಿಮ, ಮೈಕೋಲೇಔಟ್ ಉಪ-ವಿಭಾಗದ ಎಸಿಪಿ ಶಿವಶಂಕರ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಬೊಮ್ಮನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರೀತಮ್.ಎ.ಡಿ ರವರ ನೇತೃತ್ವದ ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.