ಫಾರ್ಮ್ ಕಂಪನಿಯಲ್ಲಿ ಸ್ಫೋಟ: ೧೭ ಮಂದಿ ಸಾವು
ನವದೆಹಲಿ,ಆ.೨೨-ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿರುವ ಫಾರ್ಮಾ ಕಂಪನಿಯೊಂದರಲ್ಲಿ ನಡೆದ ಭೀಕರ ಸ್ಫೋಟ ದುರಂತದಲ್ಲಿ ೧೭ ಮಂದಿ ಸಾವನ್ನಪ್ಪಿದ್ದು ಹಲವುಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಭೇಟಿನೀಡಿ ಪರಿಶೀಲಿಸಿದರು.
ಮೃತರ ಕುಟುಂಬಗಳಿಗೆ ೨ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಮತ್ತು ಗಾಯಗೊಂಡವರಿಗೆ ೫೦,೦೦೦ ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಅವರು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದಾರೆ.
“ಅನಕಾಪಲ್ಲಿಯ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ದುರ್ಘಟನೆಯಿಂದ ನೋವುಂಟಾಗಿದೆ, ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದಿದ್ದಾರೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ:
ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ದಟ್ಟವಾದ ಹೊಗೆಯು ರಕ್ಷಣಾ ತಂಡಗಳಿಗೆ ಆವರಣದೊಳಗೆ ಪ್ರವೇಶಿಸಲು ಅಡ್ಡಿಯಾಗಿದೆ ಎಂದು ಆಂಧ್ರಪ್ರದೇಶದ ಸಚಿವ ವಾಸಮಶೆಟ್ಟಿ ಸುಭಾಷ್ ಹೇಳಿದ್ದಾರೆ.
ಇನ್ನೂ ಹಲವಾರು ಜನರು ಒಳಗೆ ಸಿಲುಕಿರುವ ಸಾಧ್ಯತೆಯಿದೆ. ಒಳಗಿರುವವರನ್ನು ತಲುಪಲು ತಂಡಗಳು ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದಿದ್ದಾರೆ.
ದಟ್ಟ ಹೊಗೆಯಿಂದಾಗಿ ರಕ್ಷಣಾ ತಂಡಗಳು ಪ್ರಸ್ತುತ ಆವರಣಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಇನ್ನೂ ಎಷ್ಟು ಜನರು ಕಂಪನಿಯೊಳಗೆ ಸಿಲುಕಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ರಕ್ಷಣಾ ತಂಡಗಳು ಆದಷ್ಟು ಬೇಗ ಅಲ್ಲಿಗೆ ತಲುಪಲು ಕೆಲಸ ಮಾಡುತ್ತಿವೆ ಎಂದಿದ್ದಾರೆ.
ತನಿಖೆಗೆ ಆದೇಶ: ಸಿಎಂ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಸ್ಫೋಟ ಮತ್ತು ಬೆಂಕಿಯ ಕಾರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಮುಖ್ಯಮಂತ್ರಿಗಳು ಮೃತರ ಮತ್ತು ಗಾಯಾಳುಗಳ ಕುಟುಂಬಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ರಾಜ್ಯಪಾಲ ಅಬ್ದುಲ್ ನಜೀರ್ ದುರಂತದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.