ಚಾರ್ಮಾಡಿಘಾಟ್‌ನಲ್ಲಿ ಮತ್ತೆ ಗುಡ್ಡ ಕುಸಿತ
(ಸಂಜೆವಾಣಿ ಪ್ರತಿನಿಧಿಯಿಂದ)
ಚಿಕ್ಕಮಗಳೂರು,ಆ.೨೨:ಚಾರ್ಮಾಡಿಘಾಟ್‌ನಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಗುಡ್ಡ ಕುಸಿತ ಸಂಭವಿಸಿದೆ. ಚಾರ್ಮಾಡಿಘಾಟ್‌ನ ೮ ಮತ್ತು ೯ನೇ ತಿರುವಿನಲ್ಲಿ ಗುಡ್ಡ ಮತ್ತು ಬಂಡೆಗಳು ಕುಸಿದು ಬಿದ್ದಿವೆ.
ಮಳೆ ನೀರಿನೊಂದಿಗೆ ರಸ್ತೆಗೆ ಕಲ್ಲುಗಳು ತೇಲಿಕೊಂಡು ಬಂದಿವೆ.ಆದರೆ, ವಾಹನ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ. ಸುದ್ದಿ ತಿಳಿದ ತಕ್ಷಣ ಚಾರ್ಮಾಡಿಘಾಟ್‌ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಭಾಗದಲ್ಲಿ ಎರಡು ದಿನಗಳಿಂದ ಚಾರ್ಮಾಡಿಘಾಟ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಯಲ್ಲಿ ಮಂಡಿಯುದ್ದಕ್ಕೂ ನೀರು ಹರಿಯುತ್ತಿವೆ. ಚಿಕ್ಕಮಗಳೂರು-ದ.ಕನ್ನಡ ಜಿಲ್ಲೆಯನ್ನು ಚಾರ್ಮಾಡಿಘಾಟ್ ಸಂಪರ್ಕಿಸುತ್ತವೆ.
ಬೆಂಗಳೂರಿನಿಂದ ದ.ಕನ್ನಡ, ಉಡುಪಿ ಭಾಗಗಳಿಗೆ ತೆರಳಬೇಕಾದರೆ ಶಿರಾಡಿಘಾಟ್ ಮೂಲಕ ತೆರಳುತ್ತಿದ್ದರು. ಆದರೆ, ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿಘಾಟ್‌ನಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.