ಏರ್‌ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ
ತಿರುವನಂತಪುರ,ಆ.೨೨-ಮುಂಬೈನಿಂದ ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಬಾಂಬ್ ಬೆದರಿಕೆಯಿಂದಾಗಿ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಪೈಲಟ್‌ಗೆ ಬೆಳಗ್ಗೆ ೭.೩೦ಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಎಚ್ಚರಿಸಿದೆ.
ಲ್ಯಾಂಡಿಂಗ್ ಆದ ತಕ್ಷಣ, ಬೆಳಿಗ್ಗೆ ೮ ಗಂಟೆಗೆ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬೆಳಗ್ಗೆ ೮.೪೪ಕ್ಕೆ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರತರಲಾಗಿದೆ. ವಿಮಾನದಲ್ಲಿ ಇದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ೧೩೫ ಪ್ರಯಾಣಿಕರಿದ್ದರು ಎನ್ನಲಾಗಿದೆ. ಸದ್ಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಎಂದಿನಂತೆ ಮುಂದುವರಿದಿದೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
ಅಧಿಕಾರಿಗಳು, ಪೊಲೀಸರು ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ.