ಯಾರು ಏನೇ ಹೇಳಲಿ ಕುಡಿಯುವ ನೀರಿನ ದರ ಹೆಚ್ಚಳ ನಿಶ್ಚಿತ
ಸಂಕಷ್ಟದಲ್ಲಿ ಜಲಮಂಡಳಿ
ಬೆಂಗಳೂರು,ಆ.೨೨:ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯವಾಗಿದೆ. ಜಲಮಂಡಳಿ ನಷ್ಟದಲ್ಲಿದ್ದು, ನೌಕರರಿಗೆ ಸಂಬಳ ಕೊಡಲೂ ಹಣ ಇಲ್ಲ. ಹೀಗಾಗಿ ಯಾರು ಏನೇ ಹೇಳಿದರೂ ನಾನು ಮಾತ್ರ ನೀರಿನ ದರ ಏರಿಸುವುದು ನಿಶ್ಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಾಗರಿಕರಿಗೆ ಎಷ್ಟೇ ಮಾಡಿದರೂ ಅಷ್ಟೆ. ಅವರಿಗೆ ಉಪಕಾರ, ಸ್ಮರಣೆ ಇಲ್ಲ. ಬೈಯುತ್ತಾರೆ, ಕಮೆಂಟ್ ಮಾಡುತ್ತಾರೆ. ವಾಟ್ಸಾಪ್‌ನಲ್ಲಿ ಹಾಕುತ್ತಾರೆ ನಂತರ ಮರೆತು ಬಿಡುತ್ತಾರೆ. ನೀರು ಕೊಟ್ಟರೆ ತೆಗೆದುಕೊಳ್ಳುತ್ತಾರೆ ಅಷ್ಟೇ ಕೆಲವರು ದುಡ್ಡು ಕಟ್ಟುವವರು ಕಟ್ಟುತ್ತಾರೆ.
ಕೆಲವು ಕಟ್ಟಲ್ಲ, ಮಾಧ್ಯಮದವರು ಬೈಯಲಿ, ಜನರೂ ಬೈಯಲಿ, ವಿಪಕ್ಷಗಳು ವಿರೋಧ ಮಾಡಲಿ ಜಲಮಂಡಳಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದರು.
ವಿಧಾನಸೌಧದ ಮುಂಭಾಗದಲ್ಲಿ ೧೧೦ ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕಳೆದ ೮-೯ ವರ್ಷಗಳಿಂದ ಕುಡಿಯುವ ನೀರಿನ ದರ ಏರಿಕೆ ಮಾಡಿಲ್ಲ. ಅಂತರ್ಜಲ ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ನೀರಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಜಲಮಂಡಳಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ವಿದ್ಯುತ್ ದರ ಪಾವತಿ ಮಾಡಲು ಹಣವಿಲ್ಲದಂತಾಗಿದೆ. ಎಷ್ಟು ದರ ಹೆಚ್ಚಳ ಮಾಡಬೇಕೆಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ, ಸಮಿತಿ ಸಭೆ ಮತ್ತು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಾಕಷ್ಟು ವರ್ಷಗಳಿಂದ ಕುಡಿಯುವ ನೀರಿನ ದರ ಏರಿಕೆ ಮಾಡಿಲ್ಲ, ಬೆಂಗಳೂರಿನಲ್ಲಿ ೧.೪೦ ಕೋಟಿ ಜನಸಂಖ್ಯೆ ಇದ್ದು, ಮೇಕೆದಾಟು ಯೋಜನೆ ಬಗ್ಗೆ ಅನುಮತಿ ದೊರೆಯುವ ಭರವಸೆ ಇದೆ ಎಂದರು.
ಶರಾವತಿ ಕುಡಿಯುವ ನೀರಿನ ಯೋಜನೆಯೂ ಸರ್ಕಾರದ ಮುಂದೆ ಇದೆ. ಆದರೆ, ಶಿವಮೊಗ್ಗದಲ್ಲಿ ಈ ಪ್ರಸ್ತಾಪಕ್ಕೆ ವಿರೋಧವಿದೆ. ನೀರಾವರಿ ಯೋಜನೆಯಲ್ಲಿ ಹೊಸ ಮಸೂದೆಯನ್ನು ತಂದಿದ್ದೇವೆ.ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿ.ಮೀನಲ್ಲಿ ಯಾರೂ ಬೋರ್‌ವೆಲ್ ಕೊರೆಯುವಂತಿಲ್ಲ. ಕಾಲುವೆಗಳಿಂದಲೂ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ಈ ಹೊಸ ತಿದ್ದುಪಡಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಹೊಸ ಕಾನೂನು ಬಂದಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು
ಖಾಸಗೀಕರಣ ಇಲ್ಲ
ಜಲ ಮತ್ತು ಇಂಧನ ಇಲಾಖೆ ಪ್ರಮುಖವಾಗಿದ್ದು, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಎರಡು ಇಲಾಖೆಯನ್ನೂ ನಾನು ನೋಡುತ್ತಿದ್ದೇನೆ.
ಈ ಹಿಂದೆ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ತಾವು ನಗರಾಭಿವೃದ್ಧಿ ಮಂತ್ರಿಯಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಮಾಡುವ ಬಗ್ಗೆ ಸಮಾಲೋಚನೆ ನಡೆದಿತ್ತು. ಈ ಬಗ್ಗೆ ಫ್ರಾನ್ಸ್‌ಗೆ ಭೇಟಿ ನೀಡಿ ಬಂದಿದ್ದೇನೆ. ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗಲಿದೆ ಎಂಬ ಮಾಹಿತಿ ದೊರೆತಿದೆ.
ಖಾಸಗೀಕರಣಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಈ ಪ್ರಸ್ತಾಪವನ್ನು ಕೈ ಬಿಟ್ಟೆವು. ಈಗಲೂ ತಾವು ಸಚಿವರಾದ ಮೇಲೆ ಮತ್ತೆ ಕೆಲವರು ಬಂದರೂ ಆಗಲಿಲ್ಲ. ತಾವಿರುವವರೆಗೂ ಖಾಸಗೀಕರಣ ಆಗಲ್ಲ ಎಂದು ಹೇಳಿರುವುದಾಗಿ ವಿವರಿಸಿದರು.