ರೋಡ್ ರೇಜ್ ಗೆ ಡೆಲಿವರಿ ಬಾಯ್ ಬಲಿ ಆರೋಪಿಗಳ ಬಂಧನ
ಬೆಂಗಳೂರು, ಆ.೨೨- ನಗರದಲ್ಲಿ ದಿನೇ ದಿನೇ ರೋಡ್ ರೇಜ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಮುಂದೆ ಹೋಗಲು ಜಾಗ ಬಿಡದಿದ್ದರಿಂದ ಉಂಟಾದ ಆಕ್ರೋಶ ಡೆಲಿವರಿ ಬಾಯ್ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ರೋಡ್ ರೇಜ್ ನಲ್ಲಿ ಡೆಲಿವರಿ ಬಾಯ್ ಮಹೇಶ್ ಕೊಲೆಯಾದರೆ,ಕೃತ್ಯ ನಡೆಸಿದ ಅರವಿಂದ್ ಹಾಗೂ ಕೇಶವ್ ನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಮಹೇಶ್ ಆತನ ಗೆಳೆಯರಾದ ಬಾಲಾಜಿ ಮತ್ತು ನಿಕಿಲ್ ಜೊತೆ ಟೀ ಕುಡಿದು ಬೈಕ್‌ನಲ್ಲಿ ಬರುತ್ತಿದ್ದಾಗ, ಅರವಿಂದ್ ಚಲಾಯಿಸುತ್ತಿದ್ದ ಕಾರು ವೇಗವಾಗಿ ಬಂದಿದೆ. ಜಾಗ ಕೊಡದ ಕಾರಣಕ್ಕೆ ಹತ್ತಿರಕ್ಕೆ ಬಂದು ಹಾರ್ನ್ ಮಾಡಿದ್ದಾನೆ.
ಇದೇ ವೇಳೆ ಬೈಕು, ಕಾರ್‌ಗೆ ಸ್ವಲ್ಪ ಟಚ್ ಆಗಿದೆ ಎಂದು ಕಾರು ಚಾಲಕ ಅರವಿಂದ್ ಬೈಕ್ ಸವಾರರನ್ನು ವೇಗವಾಗಿ ಚೇಸ್ ಮಾಡಲು ಮುಂದಾಗಿದ್ದಾನೆ. ದಾರಿಯಲ್ಲಿ ಇಬ್ಬರು ಯುವಕರು ಮೇನ್ ರೋಡ್‌ನಿಂದ ಸಣ್ಣ ರೋಡ್‌ಗೆ ಬಂದಾಗ ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರನನ್ನು ಹಿಂಬಾಲಿಸಿ ವೇಗವಾಗಿ ಬಂದ ಕಾರು ಚಾಲಕ ಜಿಕೆವಿಕೆ ಲೇಔಟ್‌ಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಇದ್ದ ಮನೆಗೆ ರಭಸವಾಗಿ ಬೈಕ್ ಗುದ್ದಿ ಸ್ಥಳದಲ್ಲೆ ಬೈಕ್ ಸವಾರ ಮಹೇಶ್ ಮೃತಪಟ್ಟಿದ್ದಾನೆ.
ಕೊಲೆಯಾದ ಮಹೇಶ್ ನಿನ್ನೆ ಸಂಜೆ ಆತನ ಗೆಳೆಯರ ಜೊತೆಗೆ ಟೀ ಕುಡಿಯಲು ಹೋಗಿದ್ದ. ಇತ್ತ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಅರವಿಂದ್ ಆತನ ಗೆಳೆಯ ಕೇಶವ್ ಜೊತೆಗೆ ಹಾಲು ತರಲು ಹೋಗಿದ್ದು,ಸಂಬಂಧವೇ ಇಲ್ಲದ ಇಬ್ಬರು ಅವರವರ ಕೆಲಸ ಮುಗಿಸಿ ಮನೆಗೆ ಬಂದಿದ್ದರೆ ಇವತ್ತು ಪರಿಸ್ಥಿತಿ ಹೀಗಿರುತ್ತಿರಲಿಲ್ಲ! ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿ ಕೇಶವ್ ಮತ್ತು ಅರವಿಂದರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.