ಶಕ್ತಿಕಾಂತ್ ದಾಸ್‌ಗೆ ಮೋದಿ ಅಭಿನಂದನೆ
ನವದೆಹಲಿ, ಆ. ೨೧- ಜಾಗತಿಕ ಹಣಕಾಸು ವರದಿಯಲ್ಲಿ ಎ+ ರೇಟಿಂಗ್ ಪಡೆದಿರುವ ಆರ್‌ಬಿಐ ಗೌರ್‍ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಆರ್ ಬಿಐ ಗೌರ್‍ನರ್ ಶಕ್ತಿಕಾಂತ ದಾಸ್ ಅವರಿಗೆ ಗ್ಲೋಬಲ್ ಫೈನಾನ್ಸ್ ನಿಯತಕಾಲಿಕೆ ಎ+ ರೇಟಿಂಗ್ ನೀಡಿದ್ದು ಸತತ ಎರಡನೇ ವರ್ಷಕ್ಕೆ ಜಾಗತಿಕವಾಗಿ ಉನ್ನತ ಶ್ರೇಣಿ ಪಡೆದ ಮೂರು ಕೇಂದ್ರೀಯ ಬ್ಯಾಂಕ್ ಗಳಲ್ಲಿ ಶಕ್ತಿಕಾಂತ್ ದಾಸ್ ಒಬ್ಬರಾಗಿದ್ದಾರೆ.
ಭಾರತದ ಆರ್ಥಿಕ ಸವಾಲುಗಳಿಗೆ ಸೂಕ್ತ ನಿರ್ದೇಶನ ನೀಡಿರುವ ಶಕ್ತಿಕಾಂತ್ ಅವರ ನಾಯಕತ್ವವನ್ನು ಗ್ಲೋಬಲ್ ಫೈನಾನ್ಸ್ ಗುರುತಿಸಿ ಈ ಗೌರವ ನೀಡಿದೆ.
ಉಳಿದಂತೆ ಡೆನ್ಮಾರ್ಕ್‌ನ ಕ್ರಿಶ್ಚಿಯನ್ ಕೆಟಲ್ ಥಾಮನ್ಸನ್ ಮತ್ತು ಸ್ವಿಜರ್‌ರ್ಲೆಂಡ್‌ನ ಥಾಮಸ್ ಜೋರ್ಡಾನ್ ಈ ಗೌರವ ಪಡೆದ ಮತ್ತೊಬ್ಬರಾಗಿದ್ದಾರೆ. ಗ್ಲೋಬಲ್ ಫೈನಾನ್ಸ್ ನಿಯತಕಾಲಿಕ ಕೇಂದ್ರ ಬ್ಯಾಂಕರ್ ವರದಿಯನ್ವಯ ೨೦೨೪ ಹಣದುಬ್ಬರ ನಿಯಂತ್ರಣ, ಆರ್ಥಿಕ, ಬೆಳವಣಿಗೆ, ಕರೆನ್ಸಿ ಸ್ಥಿರತೆ ಮತ್ತು ಬಡ್ಡಿ ದರ ನಿರ್ವಹಣೆಯಲ್ಲಿ ಅವರ ಕಾರ್ಯಕ್ಷಮತೆ ಆಧಾರದ ಮೇಲೆ ಕೇಂದ್ರ ಬ್ಯಾಂಕ್ ಗೌರ್‍ನರ್‌ಗಳನ್ನು ರೇಟಿಂಗ್ ಮಾಡಲಾಗಿದೆ.
ಭಾರತದ ಆರ್ಥಿಕ ಸವಾಲುಗಳ ನಿರ್ವಹಣೆಯಲ್ಲಿ ಶಕ್ತಿಕಾಂತ್ ದಾಸ್ ಅಸಾಧಾರಣ ನಾಯಕತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಶಕ್ತಿಕಾಂತ್ ದಾಸ್ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ. ಇದು ಆರ್‌ಬಿಐನಲ್ಲಿ ಅವರ ನಾಯಕತ್ವ ಮತ್ತು ಬೆಳವಣಿಗೆಗೆ ಮತ್ತು ಸ್ಥಿರತೆ ಖಾತರಿಪಡಿಸುವ ಅವರ ಕಾರ್ಯಕ್ಕೆ ದೊರೆತ ಮನ್ನಣೆ, ಜಾಗತಿಕ ಆರ್ಥಿಕ, ಅನಿಶ್ಚಿತತೆಯ ನಡುವೆ ಭಾರತದ ಹಣಕಾಸು ನೀತಿಯನ್ನು ಮಾರ್ಗದರ್ಶನ ಮಾಡುವಲ್ಲಿ ದಾಸ್ ಪಾತ್ರ ದೊಡ್ಡದು ಎನ್ನುವುದಕ್ಕೆ ಈ ಪುರಸ್ಕಾರ ಸಾಕ್ಷಿ ಎಂದು ಮೋದಿ ತಿಳಿಸಿದ್ದಾರೆ.