ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ
ಮಂಗಳೂರು,ಆ.೨೧-ಸಕಲೇಶಪುರ-ಬಾಳ್ಳುಪೇಟೆ ನಡುವಿನ ಮಂಗಳೂರು-ಬೆಂಗಳೂರು ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತದಿಂದ ಬಿದ್ದಿರುವ ಮಣ್ಣು ತೆರವಿನ ಕಾರ್ಯ ಮುಗಿದ ಬೆನ್ನಲ್ಲೇ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ.
ರೈಲು ಮಾರ್ಗಕ್ಕೆ ಬಿದ್ದಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯವು ನಿನ್ನೆ ಸಂಜೆಗೆ ಪೂರ್ಣಗೊಂಡಿದೆ. ಮತ್ತೆ ಈ ರೈಲ್ವೆ ಮಾರ್ಗವನ್ನು ರೈಲುಗಳ ಸಂಚಾರಕ್ಕೆ ಮುಕ್ತವಾಗುವಂತೆ ಮರು ಹೊಂದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲವು ವಾರಗಳ ಹಿಂದೆ ಗುಡ್ಡ ಕುಸಿದಿದ್ದ ಜಾಗದಲ್ಲಿ ಕಳೆದ ಶುಕ್ರವಾರ ಮತ್ತೆ ಗುಡ್ಡ ಕುಸಿದಿತ್ತು. ಇದೇ ಕಾರಣಕ್ಕೆ ರೈಲು ಸಂಚಾರವನ್ನು ಮತ್ತೊಮ್ಮೆ ಸ್ಥಗಿತಗೊಳಿಸಲಾಗಿತ್ತು. ಮೂರು ದಿನಗಳಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ರೈಲು ಸೇವೆಗಳು ಮತ್ತೆ ಪ್ರಾರಂಭವಾಗಿದೆ. ಮುಂದೆ ಎಲ್ಲಾ ರೈಲುಗಳು ನಿಗದಿತ ದಿನಾಂಕ ಹಾಗೂ ಸಮಯದ ಅನುಸಾರ ಸಂಚರಿಸಲಿದ್ದು, ಮಣ್ಣು ಕುಸಿದ ಸ್ಥಳದಲ್ಲಿ ರೈಲು ಸಂಚಾರದ ವೇಗಕ್ಕೆ ಮಿತಿ ಹೇರಲಾಗಿದೆ ಎಂದು ತಿಳಿದುಬಂದಿದೆ.
ಬಾಳ್ಳುಪೇಟೆ-ಸಕಲೇಶಪುರ ನಡುವೆ ಭೂಕುಸಿತದಿಂದ ರದ್ದುಗೊಂಡಿದ್ದ ಎಲ್ಲಾ ರೈಲು ಸೇವೆಗಳು ಇಂದಿನಿಂದ ಆರಂಭವಾಗಿವೆ. ಆದರೆ ಈ ಮಾರ್ಗದಲ್ಲಿ ನಿನ್ನೆ ಒಂದೇ ದಿನ ರೈಲು ಸಂಖ್ಯೆ ೧೬೫೧೬ ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ಹಾಗು ರೈಲು ಸಂಖ್ಯೆ ೦೭೩೭೮ ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಸೇವೆ ರದ್ದುಗೊಂಡಿದೆ ಎಂಬುದಾಗಿ ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.