ಮಳೆ ಆರ್ಭಟ ಕೋಡಿ ಬಿದ್ದ ಅಮಾನಿಕೆರೆ
ತುಮಕೂರು, ಆ. ೨೧- ನಗರದಲ್ಲಿ ಕಳೆದ ರಾತ್ರಿ ಹಾಗೂ ಇಂದು ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ತುಮಕೂರು ಅಮಾನಿಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.
ಕಳೆದ ೩-೪ ದಿನಗಳಿಂದ ನಗರ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮಾನಿಕೆರೆಯ ಒಳ ಹರಿವು ಹೆಚ್ಚಾಗಿತ್ತು. ತಡರಾತ್ರಿ ಮತ್ತು ಬೆಳಿಗ್ಗೆ ೬.೩೦ ರಿಂದ ೯ ಗಂಟೆವರೆಗೆ ಸುಮಾರು ೨ ಗಂಟೆ ಅಧಿಕ ಕಾಲ ಭರ್ಜರಿ ಮಳೆಯಾಗಿದ್ದರಿಂದ ತುಮಕೂರು ಅಮಾನಿಕೆರೆ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದೆ.
ಅಮಾನಿಕೆರೆ ಕೋಡಿ ಬಿದ್ದು ಹರಿಯುತ್ತಿರುವುದರಿಂದ ನಗರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ತುಮಕೂರು ಅಮಾನಿಕೆರೆ ಕೋಡಿ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದರಿಂದ ನಗರದಿಂದ ಸಿರಾ ಗೇಟ್ ಭಾಗಕ್ಕೆ ತೆರಳಲು ದ್ವಿಚಕ್ರ ವಾಹನ ಹಾಗೂ ಆಟೋಗಳಿಗೆ ಮಾತ್ರ ತಾತ್ಕಾಲಿಕ ರಸ್ತೆ ನಿರ್ಮಿಸಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅಮಾನಿಕೆರೆ ಕೋಡಿ ಬಿದ್ದಿರುವುದರಿಂದ ಈ ತಾತ್ಕಾಲಿಕ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ನಗರದಿಂದ ಸಿರಾ ಗೇಟ್‌ಗೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ.
ಅಮಾನಿಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಕೆರೆಯ ಕೋಡಿಯ ಪಕ್ಕದಲ್ಲಿ ವಾಸವಾಗಿರುವ ಸುಮಾರು ೨೪ ಕುಟುಂಬಗಳ ಸ್ಥಳಾಂತರಕ್ಕೆ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಸೂಚನೆ ಮೇರೆಗೆ ಉಪ ಆಯುಕ್ತ ಗಿರೀಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರವಿಕುಮಾರ್ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಲ್ಲೋ-ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಹೀಗಾಗಿ ಅಧಿಕಾರಿಗಳು ಕಾರ್ಯನ್ಮೋಖರಾಗಿದ್ದು, ಬೆಳ್ಳಂಬೆಳಿಗ್ಗೆ ಸುರಿದ ಮಳೆಯಿಂದಾಗಿ ಕೆರೆ ಮೈದುಂಬಿ ಹರಿಯುತ್ತಿರುವ ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಯಾರೊಬ್ಬರು ಕೆರೆಯ ಕೋಡಿ ಬಳಿ ತೆರಳಿ ಹರಿಯುತ್ತಿರುವ ನೀರನ್ನು ವೀಕ್ಷಿಸದಂತೆ ಕ್ರಮ ಕೈಗೊಂಡಿದ್ದಾರೆ.
ಎಸ್. ಮಾಲ್ ಮುಂಭಾಗದಲ್ಲಿ ನೀರು ಹರಿಯುತ್ತಿರುವ ರಸ್ತೆಯಲ್ಲಿ ವಾಹನಗಳು, ಜನಸಾಮಾನ್ಯರು ಓಡಾಡದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.