ಪ್ರಜಾಪ್ರಭುತ್ವ ಉಳಿವಿಗೆ ಬೈಡನ್ ಕಣ್ಣೀರು
ಚಿಕಾಗೋ/ವಾಷಿಂಗ್ಟನ್,ಆ.೨೦- ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ಚಿಕಾಗೋದಲ್ಲಿ ನಡೆದ ವಿದಾಯ ಭಾಷಣದಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿ ಎಂದು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ ಪರ ಪ್ರಚಾರದಲ್ಲಿ ಭಾಗಿಯಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು, ಹೀಗಾಗಿ ಕಮಲಾ ಹ್ಯಾರೀಸ್ ಅವರನ್ನು ಗೆಲ್ಲಿಸಿ ಎಂದು ಹೇಳಿದರು.
ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಂತೆ ಸಮಾವೇಶದಲ್ಲಿ ನೆರದಿದ್ದ ಸಾವಿರಾರು ಮಂದಿ ಡೆಮಾಕ್ರಟಿಕ್‌ಗಳು, ಅಭಿಮಾನಿಗಳು ಮತ್ತು ಸಾರ್ವಜನರಿಕರು ಸುಮಾರು ನಾಲ್ಕು ನಿಮಿಷಗಳ ಕಾಲ ಚಪ್ಪಾಳೆ ಸುರಿಮಳೆ ಸುರಿಸಿ “ಲವ್ ಯೂ ಜೋ” ಎಂದು ಕೂಗಿ ಜೈಕಾರ ಹಾಕಿದ ಘಟನೆ ನಡೆದಿದೆ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಕೆಲಸ ಮಾಡುವ ಅವಕಾಶ ನೀಡಿದ್ದೀರಿ ಇದಕ್ಕಾಗಿ ನಿಮಗೆ ಧನ್ಯವಾದ ಎಷ್ಟು ಹೇಳಿದರೂ ಸಾಲದು, ಸಿಕ್ಕ ಅವಕಾಶದಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎನ್ನುತ್ತಲೇ ಭಾವುಕರಾದರು.
ಈ ಸಮಯದಲ್ಲಿ ಪುತ್ರಿ ಆಶ್ಲೇ ಬಿಡೆನ್,ಪತ್ನಿ ಜಿಲ್ ಬಿಡೆನ್ ಅವರ ಸಹಕಾರ ಮತ್ತು ಬೆಂಬಲ ಶ್ಲಾಘನೀಯ, ಇದಕ್ಕಾಗಿ ಅವರಿಗೂ ಮತ್ತು ಕುಟುಂಬಕ್ಕೆ ಕೃತಜ್ಞತೆಗಳು ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯ ಅಮೇರಿಕಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ. ಹೀಗಾಗಿ ಪ್ರಜಾಪ್ರಭುತ್ವವನ್ನು ಉಳಿಸಲು ಮತ ಚಲಾಯಿಸಿ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಟಿಮ್ ವಾಲ್ಜ್ ಅವರನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವವನ್ನು ಸಂರಕ್ಷಿಸಬೇಕು” ಇಲ್ಲದಿದ್ದರೆ ಅಮೇರಿಕಾ ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಇದು “ಮುಂದಿನ ದಶಕಗಳಲ್ಲಿ ರಾಷ್ಟ್ರ ಮತ್ತು ಪ್ರಪಂಚದ ಭವಿಷ್ಯವನ್ನು ನಿರ್ಧರಿಸುತ್ತದೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.