ಕಾವಲು ಪಡೆ ಮುಖ್ಯಸ್ಥ ರಾಕೇಶ್ ನಿಧನ
ನವದೆಹಲಿ, ಆ.೧೯-ಭಾರತೀಯ ಕರಾವಳಿ ಕಾವಲು ಪಡೆಯ ಮುಖ್ಯಸ್ಥ ರಾಕೇಶ್ ಪಾಲ್ ನಿನ್ನೆ ಚೆನ್ನೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಧಿಕಾರಿಯ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮಹಾನಿರ್ದೇಶಕರಾಗಿದ್ದ ಪಾಲ್ ಅತ್ಯಂತ ಸಮರ್ಥ ಹಾಗೂ ಬದ್ಧತೆ ಹೊಂದಿದ್ದ ಅಧಿಕಾರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
ಕಳೆದ ವರ್ಷದ ಜುಲೈ ೧೯ರಂದು ಅವರು ಐಸಿಜಿಯ ೨೫ನೇ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ರಕ್ಷಣಾ ಸಚಿವರನ್ನು ಐಸಿಜಿ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಬೇಕಿದ್ದ ರಾಕೇಶ್ ಅಸ್ವಸ್ಥರಾಗಿದ್ದರಿಂದ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜನಾಥ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಪಾಲ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಡಿಎಂಕೆ ಮುಖಂಡ ದಿವಂಗತ ಎಂ.ಕರುಣಾನಿಧಿಯವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಸಿಂಗ್ ಪಾಲ್ಗೊಂಡರು.
ತಮ್ಮ ೩೪ ವರ್ಷಗಳ ಸೇವಾವಧಿಯಲ್ಲಿ ರಾಕೇಶ್ ಅವರು ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ವಾಯವ್ಯ ವಿಭಾಗ ಕರಾವಳಿ ಕಾವಲು ಪಡೆಯ ಕಮಾಂಡರ್ ಆಗಿ, ನೀತಿ ಮತ್ತು ಯೋಜನಾ ವಿಭಾಗದ ಉಪ ಮಹಾನಿರ್ದೇಶಕರಾಗಿ, ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.