ಹೈಕೋರ್ಟಿಗೆ ರಿಟ್ ಅರ್ಜಿ
ಬೆಂಗಳೂರು, ಆ. ೧೯- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ರಾಜ್ಯ ಹೈಕೋರ್ಟ್‌ಗೆ ಎರಡು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ರಾಜ್ಯಪಾಲರ ಪ್ರಾಸಿಕ್ಯೂಷನ್ ತೀರ್ಮಾನವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಬೆಳಗ್ಗೆಯೇ ನ್ಯಾ. ಹೇಮಂತ ಚಂದನಗೌಡರ್ ಅವರ ಏಕ ಸದಸ್ಯ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಮಧ್ಯಾಹ್ನ ೨.೩೦ರ ನಂತರ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನು ಹಾಗೂ ಸಂವಿಧಾನ ಬಾಹಿರ.
ಈ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಿದ್ಧರಾಮಯ್ಯ ಪರ ವಕೀಲರಾದ ರವಿವರ್ಮಕುಮಾರ್ ನ್ಯಾಯಾಲಯಕ್ಕೆ ಇಂದು ಬೆಳಗ್ಗೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಮನವಿ ಮಾಡಿದರು.
ಸಿದ್ಧರಾಮಯ್ಯ ಪರ ವಕೀಲರ ಮನವಿಯನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರಾದ ಹೇಮಂತ್ ಚಂದನ್ ಗೌಡರ್ ರವರ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ಮಧ್ಯಾಹ್ನ ೨.೩೦ಕ್ಕೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಮತ್ತೊಂದು ರಿಟ್ ಅರ್ಜಿ ಸಲ್ಲಿಕೆ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾ. ಎಂ. ನಾಗಪ್ರಸನ್ನ ಅವರ ವಿಶೇಷ ನ್ಯಾಯ ಪೀಠದ ಮುಂದೆ ಸಹ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸಿದ್ಧರಾಮಯ್ಯ ಪರ ವಕೀಲರಾದ ಶತಬಿಶ ಶಿವಣ್ಣ ಅವರು ನ್ಯಾ. ಎಂ. ನಾಗಪ್ರಸನ್ನ ಅವರ ವಿಶೇಷ ಪೀಠದ ಮುಂದೆ ಮೆಮೋ ಸಲ್ಲಿಸಿ ತುರ್ತು ವಿಚಾರಣೆಗೆ ಕೋರಿದರು. ಆಗ ನ್ಯಾಯಾಧೀಶರಾದ ಎನ್. ನಾಗಪ್ರಸನ್ನ ಅವರು ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದರು.
ಈ ಅರ್ಜಿಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ರಾಜ್ಯ ಸರ್ಕಾರದ ಹಾಗೂ ಸಿದ್ಧಱಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಿರುವ ಮೂವರು ಸಾಮಾಜಿಕ ಹೋರಾಟಗಾರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ರಿಟ್ ಅರ್ಜಿಯಲ್ಲಿ ಏನಿದೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರು ದಾಖಲೆಗಳ ಪರಿಶೀಲನೆ ಮಾಡಿಲ್ಲ. ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ನೀಡಿರುವ ಅನುಮತಿ ಆದೇಶವನ್ನು ರದ್ದು ಮಾಡಬೇಕು ಎಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿರುವುದನ್ನು ತಿರಸ್ಕರಿಸಬೇಕು ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಮತ್ತು ಈ ಸಂಬಂಧ ರಾಜ್ಯಪಾಲರು ನೀಡಿದ್ದ ಶೋಕಾಸ್ ನೋಟಿಸ್‌ನ್ನು ಹಿಂಪಡೆಯಬೇಕು ಎಂದು ಸಚಿವ ಸಂಪುಟ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಒಪ್ಪದೇ ಇರುವುದು ಸಂವಿಧಾನದ ೧೬೩ನೇ ವಿಧಿಗೆ ವಿರುದ್ಧವಾಗಿದೆ ಹಾಗಾಗಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಾಸಿಕ್ಯೂಷನ್ ಅನುಮತಿಯನ್ನು ಯಾವ ಯಾವ ಕಾರಣಕ್ಕೆ ರದ್ದು ಮಾಡಬೇಕು ಎಂಬ ಎಲ್ಲ ಕಾನೂನಾತ್ಮಕ ಅಂಶಗಳನ್ನು ಒಳಗೊಂಡ ಸಮಗ್ರ ರಿಟ್ ಅರ್ಜಿಯನ್ನು ಸಿದ್ಧರಾಮಯ್ಯ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.ಈ ಅರ್ಜಿಯ ವಿಚಾರಣೆ ಮಧ್ಯಾಹ್ನ ಆರಂಭವಾಗಲಿದ್ದು ,ನ್ಯಾಯಾಲಯದ ತೀರ್ಮಾನ ಏನೆಂಬುದು ಕುತೂಲಹಲಕ್ಕೆ ಎಡೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಾದ ಮಂಡಿಸಲು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬೆಂಗಳೂರಿಗೆ ಆಗಮಿಸಿದರು.
ಕಾನೂನು ತಜ್ಞರ ಜತೆ ಸಮಾಲೋಚನೆ
ರಾಜ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಗೂ ಮುನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಬೆಳಗ್ಗೆ ಸಹ ಕಾನೂನು ತಜ್ಞರು ಹಾಗೂ ಕೆಲ ಆಪ್ತ ಸಚಿವರ ಜತೆ ತಮ್ಮ ನಿವಾಸದಲ್ಲಿ ಸಮಾಲೋಚನೆ ನಡೆಸಿದರು.
ನಿನ್ನೆ ಸಹ ಇಡೀ ದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯ ವಿರುದ್ಧ ಕಾನೂನು ಸಮರ ನಡೆಸುವ ಸಂಬಂಧ ಕಾನೂನು ತಜ್ಞರು ಹಾಗೂ ಆಪ್ತ ಸಚಿವರು ಜತೆ ಸಮಾಲೋಚನೆ ನಡೆಸಿದ್ದರು.