ನಾಳೆ ನ್ಯಾಯಾಲಯಕ್ಕೆ ಸಿಎಂ ಮೊರೆ
ರಾಜ್ಯಪಾಲರ ಆದೇಶ ಪ್ರಶ್ನಿಸಿ ನಾಳೆ ಹೈ ಕೋರ್ಟ್‌ಗೆ ಅರ್ಜಿ, ಕಾನೂನು ತಜ್ಞರ ಜತೆ ಚರ್ಚೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೮:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾಳೆ ನ್ಯಾಯಾಲಯದ ಮೊರೆ ಹೋಗಲಿದ್ದು, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿ ಅದನ್ನು ವಜಾ ಮಾಡುವಂತೆ ಕೋರಿ ನಾಳೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.
ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣಿಯಾಗಿದ್ದು, ಅದರಂತೆ ಕಾನೂನು ಹೋರಾಟದ ಸ್ವರೂಪಗಳ ಬಗ್ಗೆ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಗಳ ಜತೆ ಸಮಾಲೋಚನೆಯನ್ನೂ ಮುಖ್ಯಮಂತ್ರಿಗಳು ನಡೆಸಿದ್ದು, ನಾಳೆ ರಾಜ್ಯಪಾಲರ ಆದೇಶವನ್ನು ಪ್ರಶ್ನೆ ಮಾಡಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ಹೇಳಿವೆ.
ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಗಳಾದ ಕಪಿಲ್‌ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ದೆಹಲಿಯಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದು, ಇವರಿಬ್ಬರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ರೂಪು ರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ಕೈಗೊಂಡಿದ್ದು, ಹೈಕಮಾಂಡ್ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬೆನ್ನಿಗೆ ನಿಂತು ಕಾನೂನು ಹೋರಾಟಕ್ಕೆ ಎಲ್ಲ ರೀತಿಯ ಬೆಂಬಲ ನೀಡಿದೆ. ಅದರಂತೆ ಹೈಕಮಾಂಡ್ ಸೂಚನೆ ಮೇರೆಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ನ್ಯಾಯವಾದಿಗಳೂ ಆಗಿರುವ ಕಪಿಲ್ ಸಿಬಲ್ ಮತ್ತು ಅಭಿಷೇಕ್‌ಮನುಸಿಂಘ್ವಿ ಬೆಂಗಳೂರಿಗೆ ಬಂದಿದ್ದು, ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಈ ಆದೇಶವನ್ನು ಪ್ರಶ್ನಿಸಿ ಯಾವ ರೀತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಹಲವು ಹಿರಿಯ ಕಾನೂನು ತಜ್ಞರು, ಸಂವಿಧಾನ ತಜ್ಞರ ಜತೆಯೂ ಸಮಾಲೋಚನೆ ನಡೆಸಿದರು.
ಕಾನೂನು ತಜ್ಞರ ಸಲಹೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾಳೆಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಿದ್ದು, ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ,ಕಾನೂನು ಹಾಗೂ ಸಂವಿಧಾನಬಾಹಿರ ಈ ಆದೇಶಕ್ಕೆ ತಡೆ ನೀಡಿ ಈ ಆದೇಶವನ್ನು ವಜಾ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ.
ನಾಳೆಯೇ ರಾಜ್ಯ ಹೈಕೋರ್ಟ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುತ್ತ ಇಲ್ಲವೆ ನಾಡಿದ್ದು ಅರ್ಜಿ ವಿಚಾರಣೆಗೆ ಬರಲಿದೆಯೇ ಎಂಬುದು ನಾಳೆ ಮುಖ್ಯಮಂತ್ರಿಗಳು ಅರ್ಜಿ ಸಲ್ಲಿಸಿದ ನಂತರ ಗೊತ್ತಾಗಲಿದೆ.
ಜನಪ್ರತಿನಿಧಿ ನ್ಯಾಯಾಲಯಕ್ಕೂ ಅರ್ಜಿ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಈ ತಿಂಗಳ ೨೦ ರಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡುವ ಸಾಧ್ಯತೆ ಇರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡುವ ಮೊದಲು ತಮ್ಮ ಅಹವಾಲನ್ನು ಆಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪ್ರತಿನಿಧಿ ನ್ಯಾಯಾಲಯಕ್ಕೂ ನಾಳೆಯೇ ಮಧ್ಯಂತರ ಅರ್ಜಿ ಸಲ್ಲಿಸುವ ಸಾಧ್ಯತೆಗಳು ಇವೆ.
ಸಾಮಾಜಿಕ ಕಾರ್ಯಕರ್ತರುಗಳಾದ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ ಮುಖ್ಯಮಂತ್ರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿದ್ದಾರೆ.
ಈ ಅರ್ಜಿಯ ಆದೇಶವನ್ನು ನ್ಯಾಯಾಲಯ ಇದೇ ತಿಂಗಳ ೨೦ಕ್ಕೆ ಕಾಯ್ದಿರಿಸಿದೆ.
ಬಾಕ್ಸ್
ನಾಳೆ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ:ಮೈಸೂರು ಬಂದ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಪ್ರಶ್ನಿಸಿ ಒಂದೆಡೆ ಕಾಂಗ್ರೆಸ್ ಪಕ್ಷ ಕಾನೂನು ಸಮರ ನಡೆಸುವ ಜತೆಗೆ ರಾಜ್ಯಪಾಲರ ಆದೇಶದ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೂ ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯಪಾಲರ ಆದೇಶದ ವಿರುದ್ಧ ಪ್ರತಿಭಟನಾ ಧರಣಿ ನಡೆಸಲಿದ್ದು, ಮೈಸೂರು ಬಂದ್‌ಗೂ ಕರೆ ನೀಡಲಾಗಿದೆ.
ನಾಳಿನ ಕಾಂಗ್ರೆಸ್ ಹೋರಾಟದ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಳೆ ರಾಜ್ಯಪಾಲರ ಆದೇಶದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ವಿವಾದವೇ ಅಲ್ಲದ ವಿಚಾರವನ್ನು ವಿವಾದ ಮಾಡಲು ಹೊರಟ್ಟಿದ್ದಾರೆ. ಹಾಗಾಗಿ, ರಾಜ್ಯಪಾಲರ ಆದೇಶದ ವಿರುದ್ಧ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಮುSಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿರುವುದಾಗಿ ಡಿ.ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ನಡೆಸಬಹುದು. ಆದ್ದರಿಂದ ಮಹಾತ್ಮಗಾಂಧಿ ಹಾಕಿಕೊಟ್ಟಿರುವ ಅಹಿಂಸಾ ಹಾದಿಯಲ್ಲೇ ನಮ್ಮಹೋರಾಟ ನಡೆಯಲಿದೆ ಎಂದರು.
ಮೈಸೂರು ಬಂದ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶದ ವಿರುದ್ಧ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆ ಮೈಸೂರು ಬಂದ್‌ಗೆ ಕರೆ ನೀಡಲಾಗಿದೆ.
ಅಹಿಂದಾ ಸಂಘಟನೆಗಳು, ಶೋಷಿತ ವರ್ಗದ ಸಂಘಟನೆಗಳು ಸಿದ್ದರಾಮಯ್ಯರವರ ಅಭಿಮಾನಿಗಳು ಈ ಬಂದ್‌ಗೆ ಕರೆ ನೀಡಿವೆ. ಹಾಗೆಯೇ ಟೀ ನರಸೀಪುರ ಪಟ್ಟಣ ಬಂದ್‌ಗೂ ಕರೆ ನೀಡಲಾಗಿದೆ.