61 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ:ಸೋಮಣ್ಣ
ತುಮಕೂರು, ಆ. ೧೮- ಅಮೃತ್ ಭಾರತ್ ಯೋಜನೆಯಡಿ ರಾಜ್ಯದ ೬೧ ರೈಲ್ವೆ ನಿಲ್ದಾಣಗಳನ್ನು ೨ ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದರು.
ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ೬೧ ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೂತನ ಕಚೇರಿಯನ್ನು ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಇಲಾಖೆಗೆ ೭೫೬೦ ಕೋಟಿ ರೂ. ಮೀಸಲಿರಿಸಲಾಗಿದೆ. ಇದುವರೆಗೂ ಪ್ರತಿ ವರ್ಷ ೫ ಸಾವಿರ ಕೋಟಿ ರೂ.ಗಳನ್ನು ರೈಲ್ವೆ ಅಭಿವೃದ್ದಿ ಕಾರ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ಈ ಮೊತ್ತವನ್ನು ೭೫೬೦ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.
ರಾಜ್ಯದಲ್ಲಿ ೧೧೮ ಕೋಟಿ ರೂ.ಗಳ ವೆಚ್ಚದಲ್ಲಿ ವ್ಯವಸ್ಥಿತ ರೈಲ್ವೆ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ಕಂಟೋಲ್‌ಮೆಂಟ್, ಯಶವಂತಪುರ ಸೇರಿದಂತೆ ಇನ್ನಿತರೆಡೆ ವ್ಯವಸ್ಥಿತ ರೈಲ್ವೆ ನಿಲ್ದಾಣಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ತುಮಕೂರು ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಗುಬ್ಬಿ ರೈಲ್ವೆ ನಿಲ್ದಾಣಕ್ಕೆ ೭ ಕೋಟಿ ರೂ. ಹಾಗೂ ಶ್ರವಣಬೆಳಗೊಳ ರೈಲ್ವೆ ನಿಲ್ದಾಣವನ್ನು ೯ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು ಎಂದರು.
ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರಿಡುವಂತೆ ಹತ್ತಾರು ಪತ್ರಗಳು ಬಂದಿವೆ. ಹಾಗೆಯೇ ಕ್ಯಾತ್ಸಂದ್ರ ನಿಲ್ದಾಣಕ್ಕೆ ಸಿದ್ದಗಂಗಾ ನಿಲ್ದಾಣ ಎಂದು ಹೆಸರಿಡುವಂತೆಯೂ ಪತ್ರಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೂ ತಿಳಿಸಲಾಗಿದೆ. ಜತೆಗೆ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರೊಂದಿಗೆ ಚರ್ಚಿಸಿದ್ದು, ಅವರು ಸಮ್ಮತಿಸಿದ್ದಾರೆ ಎಂದರು.
ವಂದೇಭಾರತ್ ನಿಲುಗಡೆ
ಬೆಂಗಳೂರಿನಿಂದ ಹುಬ್ಬಳ್ಳಿಗೆ ತುಮಕೂರು ಮೂಲಕ ವಂದೇಭಾರತ್ ರೈಲು ಸಂಚರಿಸುತ್ತಿದ್ದು, ತುಮಕೂರಿನಲ್ಲಿ ಈ ರೈಲು ನಿಲುಗಡೆಗೆ ಪ್ರಯಾಣಿಕರಿಂದ ಮನವಿಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಆ. ೨೪ ರಂದು ಸಂಜೆ ೬ ಗಂಟೆಗೆ ವಂದೇಭಾರತ್ ರೈಲು ನಿಲುಗಡೆಯಾಗಲಿದೆ. ಅಂದಿನಿಂದ ಪ್ರತಿನಿತ್ಯ ವಂದೇಭಾರತ್ ರೈಲು ತುಮಕೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ಅವರು ಹೇಳಿದರು.
ರಾಜ್ಯಕ್ಕೆ ೩ ಮೆಮೋ ರೈಲು ನೀಡಲಾಗುತ್ತಿದ್ದು, ಈ ಪೈಕಿ ತುಮಕೂರಿಗೂ ಒಂದು ಮೆಮೋ ರೈಲು ಬರಲಿದೆ. ಈ ರೈಲು ಬೆಳಿಗ್ಗೆ ೯.೦೫ ಕ್ಕೆ ತುಮಕೂರಿನಿಂದ ಹೊರಟು ೧೦.೦೫ಕ್ಕೆ ಯಶವಂತಪುರ ತಲುಪಲಿದೆ. ಮತ್ತೆ ಸಂಜೆ ತುಮಕೂರಿಗೆ ಆಗಮಿಸಲಿದೆ. ಈ ರೈಲಿನಲ್ಲಿ ೫ ಸಾವಿರ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಸಚಿವ ಬಿ.ಸಿ. ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.