ದೇಶಾದ್ಯಂತ ವೈದ್ಯರ ಮುಷ್ಕರ:ಒಪಿಡಿ ಬಂದ್ ರೋಗಿಗಳಿಗೆ ಸಂಕಷ್ಟ
ನವದೆಹಲಿ, ಆ.೧೭- ಕೋಲ್ಕತಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಇಂದು ಬೆಳಗ್ಗೆಯಿಂದ ನಾಳೆ ಬೆಳಗ್ಗೆ ೬ ಗಂಟೆಯ ತನಕ ದೇಶವ್ಯಾಪಿ ಆಸ್ಪತ್ರೆಗಳಲ್ಲಿ ಮುಷ್ಕರ ಆರಂಭಿಸಿದೆ
ದೇಶಾದ್ಯಂತ ಎಲಾ ಆಸ್ಪತ್ರೆಗಳಲ್ಲಿ ಹೊರ ಹೋಗಿಗಳ ವಿಭಾಗ ಬಂದ್ ಮಾಡಿದ್ದರಿಂದ ರೋಗಿಗಳು ಪರದಾಡುವಂತಾಯಿತು. ಹಲವೆಡೆ ವೈದ್ಯರು ಪ್ರತಿಭಟನೆ ನಡೆಸಿದ ಪರಿಣಾಮ ರೋಗಿಗಳು ಮತ್ತು ಅವರ ಸಂಬಂಧಿಕರು ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಗತ್ಯ ಸೇವೆಗಳನ್ನು ಹೊರತು ಪಡಿಸಿ ೨೪ ಗಂಟೆಗಳ ಕಾಲ ವೈದ್ಯಕೀಯ ಸೇವೆ ಬಂದ್ ಮಾಡುವ ಮೂಲಕ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ವೈದ್ಯರಿಗೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಗತ್ಯ. ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.
ಕೋಲ್ಕತ್ತಾದ ಆರ್ ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆ ಅಮಾನವೀಯವಾದದ್ದು ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾದ್ಯವಿಲ್ಲ. ಭವಿಷ್ಯದಲ್ಲಿ ಈ ರೀತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಭಾರತೀಯ ವೈದ್ಯಕೀಯ ಸಂಘ ಐದು ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡಿದ್ದು ಅದರಲ್ಲಿ ನಿವಾಸಿ ವೈದ್ಯರ ಕೆಲಸದ ಮತ್ತು ಜೀವನ ಪರಿಸ್ಥಿತಿಗಳ ಸಂಪೂರ್ಣ ಕೂಲಂಕುಷ ಪರೀಕ್ಷೆ ಮತ್ತು ಕೆಲಸದ ಸ್ಥಳಗಳಲ್ಲಿ ಆರೋಗ್ಯ ವೃತ್ತಿಪರರ ವಿರುದ್ಧ ಹಿಂಸಾಚಾರವನ್ನು ಪರಿಶೀಲಿಸಲು ಕೇಂದ್ರ ಕಾನೂನು ಮಾಡುವಂತೆ ಒತ್ತಾಯಿಸಿದೆ.
ಅರ್ ಜಿ ಕರ್ ಆಸ್ಪತ್ರೆ ಸಂತ್ರಸ್ತರು ಇದ್ದ ೩೬ ಗಂಟೆಗಳ ಕರ್ತವ್ಯ ಶಿಫ್ಟ್ ಮತ್ತು ವಿಶ್ರಾಂತಿ ಪಡೆಯಲು ಸುರಕ್ಷಿತ ಸ್ಥಳಗಳ ಕೊರತೆ ಸೇರಿದಂತೆ ನಿವಾಸಿ ವೈದ್ಯರ ಕೆಲಸದ ಮತ್ತು ಜೀವನ ಪರಿಸ್ಥಿತಿಗಳ ಸಂಪೂರ್ಣ ಕೂಲಂಕುಷ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದೆ.
೧೮೯೭ ರ ಸಾಂಕ್ರಾಮಿಕ ರೋಗಗಳ ಕಾಯಿದೆಗೆ ೨೦೨೩ ರಲ್ಲಿ ಮಾಡಲಾದ ತಿದ್ದುಪಡಿಗಳನ್ನು ೨೦೧೯ ರ ಪ್ರಸ್ತಾವಿತ ಆಸ್ಪತ್ರೆ ಸಂರಕ್ಷಣಾ ಮಸೂದೆಗೆ ಸೇರಿಸುವ ಕೇಂದ್ರೀಯ ಕಾಯಿದೆ ಜಾರಿಗೆ ಒತ್ತಾಯಿಸಿದೆ.. ಈ ಕ್ರಮ ೨೫ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಶಾಸನವನ್ನು ಬಲಪಡಿಸುತ್ತದೆ. ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಜಾರಿಗೊಳಿಸಲಾದ ಸುಗ್ರೀವಾಜ್ಞೆಯಂತೆಯೇ ಈ ಪರಿಸ್ಥಿತಿಯಲ್ಲಿ ಸೂಕ್ತ ಎಂದು ಐಎಂಎ ಸಲಹೆ ನೀಡಿದೆ.
ಆಗಸ್ಟ್ ೧೪ ರ ರಾತ್ರಿ ಆರ್‌ಜಿ ಕರ್ ಆಸ್ಪತ್ರೆ ಆವರಣದ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ ತಕ್ಕ ಶಿಕ್ಷೆ ನೀಡುವುದರ ಜೊತೆಗೆ ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಅಪರಾಧದ ನಿಖರ ಮತ್ತು ವೃತ್ತಿಪರ ತನಿಖೆ ಮತ್ತು ನ್ಯಾಯವನ್ನು ಒದಗಿಸುವಂತೆ ವೈದ್ಯರ ಸಂಸ್ಥೆಯು ಕರೆ ನೀಡಿದೆ.
ಎಲ್ಲಾ ಆಸ್ಪತ್ರೆಗಳಲ್ಲಿ ಭದ್ರತಾ ಪ್ರೋಟೋಕಾಲ್‌ಗಳು ವಿಮಾನ ನಿಲ್ದಾಣಕ್ಕಿಂತ ಕಡಿಮೆಯಿರಬಾರದು. ಅದನ್ನು ಖಾತರಿ ಪಡಿಸಿಕೊಂಡು ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದೆ.
ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರ ಅಗತ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.
