ಅಪಘಾತ: ಒಂದೇ ಕುಟುಂಬದ ನಾಲ್ವರು ಬಲಿ
ಗದಗ,ಆ.೧೮-ವೇಗವಾಗಿ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ)ಬಸ್ ಹಾಗೂ ಕಾರು ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.
ಹಾವೇರಿ ಮೂಲದ ರುದ್ರಪ್ಪ ಅಂಗಡಿ(೫೫), ಪತ್ನಿ ರಾಜೇಶ್ವರಿ (೪೫), ಮಗಳು ಐಶ್ವರ್ಯ (೧೬), ಮಗ ವಿಜಯ(೧೨) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಅಪಘಾತದಿಂದ ಕಾರಿನ ರೂಫ್ ಸಂಪೂರ್ಣವಾಗಿ ಹಾರಿ ಹೋಗಿ ಅದರ ಮುಂಭಾಗದ ಸೀಟಿನಲ್ಲಿ ರುದ್ರಪ್ಪ ಹಾಗೂ ಪುತ್ರ ವಿಜಯ್ ಕುಳಿತಿದ್ದರೆ, ಹಿಂದಿನ ಸೀಟಿನಲ್ಲಿ ರಾಜೇಶ್ವರಿ ಹಾಗೂ ಐಶ್ವರ್ಯಾ ಕುಳಿತಿದ್ದು. ಎಲ್ಲರೂ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿರುವುದು ಭೀಕರತೆಗೆ ಸಾಕ್ಷಿಯಾಗಿದೆ.
ಬಸ್ ಇಳಕಲ್‌ನಿಂದ ಹುಬ್ಬಳ್ಳಿ ಗೆ ಹೊರಟಿದ್ದರೆ, ಕಾರು ಹಾವೇರಿಯಿಂದ ಕಲ್ಲಾಪೂರ ಕಡೆಗೆ ಸಾಗುತ್ತಿತ್ತು. ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಕಾರಿನಲ್ಲಿ ಮುಂಜಾನೆ ಕುಟುಂಬವು ಹೊರಟಿತ್ತು.
ಮಾರ್ಗ ಮಧ್ಯದ ನರಗುಂದ ತಾಲೂಕು ಕೊಣ್ಣೂರು ಬಳಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಘಾತಕ್ಕೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ನಜ್ಜುಗುಜ್ಜು:
ಅಫಘಾತಕ್ಕೆ ಯಾರ ನಿರ್ಲಕ್ಷ್ಯ ಎಂಬುದು ಪ್ರಾಥಮಿಕ ಅವಲೋಕನದಲ್ಲಿ ತಿಳಿದುಬಂದಿಲ್ಲ. ಆದರೆ, ಬಸ್‌ನ ಆಘಾತಕ್ಕೆ ಕಾರಿನ ರೂಫ್ ಸಂಪೂರ್ಣವಾಗಿ ಹಾರಿ ಹೋಗಿದೆ.
ಅಪಘಾತದ ಬಳಿಕ ಬಸ್ ನಿಯಂತ್ರಣ ಪಡೆದುಕೊಳ್ಳದೆ ಹಳ್ಳವೊಂದಕ್ಕೆ ಇಳಿದಿದೆ. ನೇರ ರಸ್ತೆಯಲ್ಲಿ ಎರಡೂ ವಾಹನಗಳು ಗರಿಷ್ಠ ವೇಗದಲ್ಲಿ ಸಾಗುತ್ತಿದ್ದ ಸಾಧ್ಯತೆಗಳು ಕಾಣಿಸುತ್ತಿದೆ. ಕಾರಿಗೆ ಗುದ್ದಿದ ಬಸ್?ನ ಮುಂಭಾಗದಲ್ಲಿ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಜಾರಿ ಹಳ್ಳಕ್ಕೆ ಇಳಿದಿದೆ.
ಬೆಚ್ಚಿಬಿದ್ದ ಸ್ಥಳೀಯರು:
ಬಸ್ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಪೊಲೀಸರ ನೆರವಿನಿಂದ ಮೃತದೇಹಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.
ಅಪಘಾತದಲ್ಲಿ ಒಂದೇ ಕುಟುಂಬದ ಎಲ್ಲರೂ ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಅಪಘಾತದ ಬಳಿಕ ಬಸ್‌ನ ಚಾಲಕ ನಿರ್ವಾಹಕ ಪರಾರಿಯಾಗಿದ್ದಾರೆ
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.