ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೮:ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬುದಕ್ಕೆ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಿರುವ ತಾತ್ಕಾಲಿಕ ಗೇಟ್ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ೧೯ನೇ ಗೇಟ್ ತುಂಡಾದ ಸಂದರ್ಭದಲ್ಲಿ ವಿಪಕ್ಷ ನಾಯಕರುಗಳಾದ ಆರ್. ಅಶೋಕ್, ವಿಜಯೇಂದ್ರ, ಗೋವಿಂದ ಕಾರಜೋಳ, ಎಚ್.ಡಿ ಕುಮಾರಸ್ವಾಮಿ ಇವರೆಲ್ಲ ಏನೇನು ಮಾತನಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಏನೇ ಇರಲಿ ತಜ್ಞರ ತಂಡ ತಾತ್ಕಾಲಿಕ ಗೇಟ್ ಅಳವಡಿಸುವ ಮೂಲಕ ಪೋಲಾಗುವ ನೀರನ್ನು ತಡೆದು ನಿಲ್ಲಿಸಿದೆ. ಈ ಕಾರ್ಯ ಮಾಡಿದ ಎಲ್ಲರನ್ನು ಸನ್ಮಾನಿಸುವ ಕೆಲಸವನ್ನು ಮುಂದೆ ಮಾಡುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿನ್ನೆ ತಾವು ಭೇಟಿ ಮಾಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷನಾಗಿ ಅವರಿಗೆ ನಾನು ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರ ನೀಡಬೇಕು ಅದರಂತೆ ಅವರನ್ನು ಭೇಟಿ ಮಾಡಿ ಎಲ್ಲವನ್ನೂ ವಿವರಿಸಿದ್ದೇನೆ ಅಷ್ಟೇ ಎಂದರು.