ಕೇಂದ್ರ ಸಚಿವ ಸೋಮಣ್ಣ ನೂತನ ಕಚೇರಿ ಉದ್ಘಾಟನೆ
ತುಮಕೂರು, ಆ. ೧೮- ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ ವಿ. ಸೋಮಣ್ಣರವರ ಕಚೇರಿಯನ್ನು ಇಂದು ಉದ್ಘಾಟಿಸಲಾಯಿತು. ಪ್ರವಾಸಿ ಮಂದಿರದ ಹಳೇ ಸರ್ಕ್ಯೂಟ್ ಹೌಸ್ ನ್ನು ಲಕ್ಷಾಂತರ ರೂ. ಖರ್ಚು ಮಾಡಿ ನವೀಕರಣಗೊಳಿಸಿದ್ದು, ಕೊನೆ ಗಳಿಗೆಯಲ್ಲಿ ಸಚಿವರ ಕಚೇರಿಗೆ ನೀಡಿದ್ದ ಆದೇಶವನ್ನು ಲೋಕೋಪಯೋಗಿ ಇಲಾಖೆ ವಾಪಸ್ ಪಡೆದಿತ್ತು. ಇದಕ್ಕೆ ಮೈತ್ರಿ ಪಕ್ಷಗಳ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು.
ಕೊನೆಗೆ ಕೇಂದ್ರ ಸಚಿವ ಸೋಮಣ್ಣ ಅವರು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ರವರನ್ನು ಭೇಟಿ ಮಾಡಿ ಕಚೇರಿ ಆರಂಭಕ್ಕೆ ಅನುಮತಿ ಪಡೆದಿದ್ದರು. ಇಂದು ಬೆಳಿಗ್ಗೆ ಪ್ರವಾಸಿ ಮಂದಿರದ ಆವರಣದಲ್ಲಿರುವ ಹಳೇ ಸರ್ಕ್ಯೂಟ್ ಹೌಸ್‌ನಲ್ಲಿ ಕೇಂದ್ರ ಸಚಿವರ ನೂತನ ಕಚೇರಿಯನ್ನು ಸಚಿವ ವಿ. ಸೋಮಣ್ಣ ಅವರು ಉದ್ಘಾಟಿಸಿದರು.
ಶಾಸ್ತ್ರೋಕ್ತವಾಗಿ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಕಚೇರಿ ಒಳಗೆ ಇಡಲಾಗಿದ್ದ ಅಜ್ಜಯ್ಯನ ಫೋಟೋ ಸೇರಿದಂತೆ ದೇವರುಗಳ ಫೋಟೋಗಳಿಗೆ ಸಚಿವ ಸೋಮಣ್ಣ ಅವರು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನೂತನ ಕಚೇರಿ ಆರಂಭಿಸಿದ ಸಚಿವ ಸೋಮಣ್ಣ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿತ್ತು.
ಭವ್ಯ ಸ್ವಾಗತ
ಪ್ರವಾಸಿ ಮಂದಿರ ಆವರಣಕ್ಕೆ ಕೇಂದ್ರ ಸಚಿವ ಸೋಮಣ್ಣ ಅವರು ಆಗಮಿಸುತ್ತಿದ್ದಂತೆ ಮೈತ್ರಿ ಪಕ್ಷಗಳ ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರೆಯಿತು.ಮೈತ್ರಿಗಳ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರದ ಘೋಷಣೆಗಳನ್ನು ಕೂಗುತ್ತಾ ಸೋಮಣ್ಣನವರಿಗೆ ಪುಷ್ಪವೃಷ್ಠಿ ಸುರಿಸಿ ಸಂಭ್ರಮಿಸಿದರು.
ಕಳೆಗಟ್ಟಿದ ಪ್ರವಾಸಿ ಮಂದಿರ
ತುಮಕೂರಿನ ಪ್ರವಾಸಿ ಮಂದಿರದ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನಸ್ತೋಮ ಸೇರಿರಲಿಲ್ಲ. ಇಂದು ಕೇಂದ್ರ ಸಚಿವ ಸೋಮಣ್ಣನವರ ನೂತನ ಕಚೇರಿ ಉದ್ಘಾಟನೆ ಹಾಗೂ ಜನಸಂಪರ್ಕ ಸಭೆ ಹಿನ್ನೆಲೆಯಲ್ಲಿ ಬೃಹತ್ ಜನಸ್ತೋಮದೊಂದಿಗೆ ಇಡೀ ಪ್ರವಾಸಿ ಮಂದಿರ ಕಳೆಗಟ್ಟಿತ್ತು.
ಜನಸಂಪರ್ಕ ಸಭೆ
ಕೇಂದ್ರ ಸಚಿವ ಸೋಮಣ್ಣನವರು ಪ್ರವಾಸಿ ಮಂದಿರದಲ್ಲಿ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಮೊಟ್ಟ ಮೊದಲನೇ ಬಾರಿಗೆ ಜನಸಂಪರ್ಕ ಸಭೆಗೆ ಚಾಲನೆ ನೀಡಿದರು.
ಇಂದು ಮಧ್ಯಾಹ್ನ ೧ ಗಂಟೆವರೆಗೆ ಜನಸಂಪರ್ಕ ಸಭೆ ನಡೆಸಿದ ಸಚಿವರು, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆಯಿಂದ ಆಗಮಿಸಿದ ಜನರ ಅಹವಾಲುಗಳನ್ನು ಆಲಿಸಿದರು. ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರಿಗೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ ಸಚಿವ ಸೋಮಣ್ಣ ಅವರು, ಸಂಬಂಧಪಟ್ಟ ಕ್ಷೇತ್ರಗಳ ಶಾಸಕರು ಹಾಗೂ ಅಧಿಕಾರಿಗಳಿಗೂ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಎಂ.ಟಿ. ಕೃಷ್ಣಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ಮಾಜಿ ಸಚಿವ ಬಿ. ನಾಗೇಶ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.