ಟಿಬಿ ಬಿ ಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಕೆ ಯಶಸ್ವಿ:ವ್ಯರ್ಥವಾಗುತ್ತಿದ್ದ ನೀರು ನಿಲ್ಲಿಸಿದ ಕನ್ನಯ ನೇತೃತ್ವದ ತಂಡ
ವಿಜಯನಗರ, ಆ.17- ತುಂಗಭದ್ರಾ ಜಲಾಶಯದಲ್ಲಿ ಮುರಿದುಹೋದ 19ನೇ ಗೇಟ್‌ನಿಂದ ಹೊರಹರಿ ಯುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ತಜ್ಞರ ತಂಡ ಸಫಲವಾಗಿದೆ. ಮೂರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಗೆ ಯಶಸ್ಸು ದೊರೆತಿದ್ದು, ಪೋಲಾಗಲಿದ್ದ ನೀರನ್ನು ಉಳಿಸುವಲ್ಲಿ ತಜ್ಞ ಕನ್ನಯ್ಯ ನಾಯ್ಡು ತಂಡ ಯಶಸ್ವಿಯಾಗಿದೆ.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್‌ಗೆ 3 ಸ್ಟಾಪ್ ಲಾಗ್ ಅಳವಡಿಸಿದ್ದರಿಂದಾಗಿ ಹೊರ ಹರಿಯುವ ನೀರುನ್ನು ನಿಲ್ಲಿಸಲಾಗಿದೆ.
19ನೇ ಗೇಟ್‌ ಸುರಕ್ಷಿತವಾದ ಪರಿಣಾಮ, ಡ್ಯಾಂನಿಂದ ನೀರು ಹೊರಬಿಡಲಾಗಿದ್ದ ಎಲ್ಲ 33 ಗೇಟ್‌ಗಳನ್ನು ಮುಚ್ಚಿ ಆ ಮೂಲಕ ಪೋಲಾಗುತ್ತಿದ್ದ ನೀರನ್ನು ಟಿಬಿ ಡ್ಯಾಂ ಮಂಡಳಿ ತಡೆದಿದೆ.
ಚೈನ್ ಲಿಂಕ್ ಕಟ್ ಆಗಿ ಮುರಿದುಬಿದ್ದಿದ್ದ 19 ನಂಬರ್‌ ಕ್ರಸ್ಟ್ ಗೇಟ್ ಅನ್ನು ಕೂಡಿಸಲು ಮೂರು ದಿನಗಳಿಂದ ತಜ್ಞರ ತಂಡ ಪ್ರಯತ್ನಿಸುತ್ತಿತ್ತು. ನಿನ್ನೆ ರಾತ್ರಿ ಮೊದಲ ಸ್ಟಾಪ್ ಲಾಗ್ ಗೇಟ್‌ನ ಮೊದಲ ಎಲಿಮೆಂಟ್ ಕೂಡಿಸುವಲ್ಲಿ ಯಶಸ್ವಿಯಾಗಿತ್ತು. ಬೆಳಗ್ಗಿನಿಂದ ಇನ್ನೆರಡು ಎಲಿಮೆಂಟ್‌ಗಳುನ್ನು ನಾಯ್ಡು ನೇತೃತ್ವದ ತಜ್ಞರ ತಂಡ ಕೂರಿಸಿದೆ.
70 ಟಿಎಂಸಿಯಷ್ಟು ನೀರು ಉಳಿಸಲು ಟಿಬಿ ಬೋರ್ಡ್ ಯಶಸ್ವಿಯಾಗಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು.