ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭಾ ಚುನಾವಣೆಗೆ ಮುಹೂರ್ತ, ಅ. 4 ಫಲಿತಾಂಶ
ನವದೆಹಲಿ:ಕೇಂದ್ರ ಚುನಾವಣಾ ಆಯೋಗ ಇಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭೆಗೆ ಇಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆ ಸೆ.18, ಸೆ.25 ಹಾಗೂ ಅಕ್ಟೋಬರ್‌ 1ರಂದು ಒಟ್ಟು ಮೂರು ಹಂತದಲ್ಲಿ ನಡೆಯಲಿದೆ ಎಂದರು.
ಹರಿಯಾಣದ ವಿಧಾನಸಭೆ ಚುನಾವಣೆ ಅ.1ರಂದು ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ಅ.4ರಂದು ನಡೆಯಲಿದೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪರಿಸ್ಥಿತಿಯನ್ನು ನಾವು ಪರಿಶೀಲಿಸಿದ್ದೇವೆ. ಅವರೆಲ್ಲರೂ ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಯಲು ಮತ್ತು ಮತದಾನದಲ್ಲಿ ಭಾಗವಹಿಸಲು ಬಯಸಿದ್ದಾರೆ.ಇದು ಬುಲೆಟ್ ವಿರುದ್ಧದ ಬ್ಯಾಲೆಟ್‌ನ ವಿಜಯವಾಗಿದೆ ಎಂದು ತಿಳಿಸಿದರು.
ಕಾಶ್ಮೀರ ಕಣಿವೆ ಹಿಂಸೆಯನ್ನು ತಿರಸ್ಕರಿಸಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲಿದ್ದು, ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 74 ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 7 ಮತ್ತು 9 ಸ್ಥಾನಗಳು ಕ್ರಮವಾಗಿ ಎಸ್‌ಸಿ ಮತ್ತು ಎಸ್‌ಟಿಗೆ ಮೀಸಲಾಗಿದೆ. ರಾಜ್ಯದಲ್ಲಿ ಒಟ್ಟು 11,838 ಮತಗಟ್ಟೆಗಳಿವೆ ಎಂದು ಅಂಕಿ ಅಂಶ ನೀಡಿದರು.
90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ. ಆಗಸ್ಟ್ 27ರಂದು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 20,629 ಮತಗಟ್ಟೆಗಳಿವೆ. ಈ ಪೈಕಿ ನಗರ ಪ್ರದೇಶಗಳಲ್ಲಿ 7,132 ಮತಗಟ್ಟೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 13,497 ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಲ್ಲಿಯೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ರಾಜೀವ್ ವಿವರಿಸಿದರು.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದೆ ಮತ್ತು ಹಲವಾರು ಹಬ್ಬಗಳು ಕೂಡ ಸಾಲು ಸಾಲು ಇರುವುದರಿಂದ ಈ ಚುನಾವಣೆಗಳ ಜತೆ ಮಹಾರಾಷ್ಟ್ರ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಮತ್ತೊಂದೆಡೆ ಇದರ ಜೊತೆ ನಡೆಯಬೇಕಿದ್ದ ಜಾರ್ಖಂಡ್‌ ವಿಧಾನಸಭೆ ಚುನಾವಣಾ ದಿನಾಂಕವೂ ನಿಗದಿಯಾಗಿಲ್ಲ.
ಠಾಕ್ರೆ ಆಕ್ರೋಶ
ಮಹಾರಾಷ್ಟ್ರದಲ್ಲಿ ಚುನಾವಣೆ ಘೋಷಣೆಯಾಗದಿರುವ ಬಗ್ಗೆ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಆದಿತ್ಯಾ ಠಾಕ್ರೆ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಬಾಸ್‌ ಇನ್ನೂ ಅನುಮತಿ ಕೊಟ್ಟಿಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ.