ಹಳಿತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಕಾನ್ಪುರ,ಆ.೧೭-ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದ ಬಳಿ ಸಬರಮತಿ ಎಕ್ಸ್‌ಪ್ರೆಸ್ ಹಳಿತಪ್ಪಿದೆ. ರೈಲು ಇಂಜಿನ್ ಬೃಹತ್ ಬಂಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅದೃಷ್ಟವಶಾತ್ ಈ ರೈಲು ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಇದರಿಂದ ಪಾರಾಗುತ್ತಿದ್ದಂತೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆಯಲ್ಲಿ ೨೦ ಬೋಗಿಗಳು ಹಳಿತಪ್ಪಿವೆ. ಈ ಪ್ರದೇಶದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.
ಎಕ್ಸ್‌ಪ್ರೆಸ್ ರೈಲು ಅಪಘಾತದ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೊಂದು ಪಿತೂರಿ ಎಂದು ಬಣ್ಣಿಸಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಬರಮತಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ ೧೯೧೬೮ ಶನಿವಾರ ಮುಂಜಾನೆ ಯುಪಿಯ ಕಾನ್ಪುರ-ಭೀಮ್‌ಸೇನ್ ನಿಲ್ದಾಣಗಳ ನಡುವಿನ ಬ್ಲಾಕ್ ವಿಭಾಗದಲ್ಲಿ ಹಳಿತಪ್ಪಿದೆ. ಆದರೆ, ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಭೀಮಸೇನ್ ಬಳಿ ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟ ಅರ್ಧ ಗಂಟೆಯ ನಂತರ ೨.೩೨ ಕ್ಕೆ ರೈಲು ಹಳಿತಪ್ಪಿದೆ.
ಮತ್ತೊಂದೆಡೆ, ಪ್ರಯಾಣಿಕರನ್ನು ಕಾನ್ಪುರಕ್ಕೆ ಸಾಗಿಸಲು ಭಾರತೀಯ ರೈಲ್ವೇ ಈಗಾಗಲೇ ಬಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸಬರಮತಿ ಎಕ್ಸ್‌ಪ್ರೆಸ್ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಕಾನ್ಪುರಕ್ಕೆ ಕರೆದೊಯ್ಯಲಾಗುವುದು ಮತ್ತು ಅಲ್ಲಿಂದ ವಿಶೇಷ ರೈಲಿನ ಮೂಲಕ ತಮ್ಮ ಸ್ಥಳ ತಲುಪಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಬರಮತಿ ಎಕ್ಸ್‌ಪ್ರೆಸ್ ಯುಪಿಯ ವಾರಣಾಸಿಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಸೇವೆಗಳನ್ನು ಒದಗಿಸುತ್ತದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ.ಕೂಲಂಕುಷವಾಗಿ ತಪಾಸಣೆ ನಡೆಸಿದ ಬಳಿಕ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ದೃಢಪಟ್ಟಿಸಿದೆ.