ಸಿಎಂ ರಾಜೀನಾಮೆ ನೀಡಲ್ಲ
ಬೆಂಗಳೂರು, ಆ. ೧೭-ಮುಡಾ ಹಗರಣಕ್ಕೆ ಸಂಬಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ರಾಜ್ಯಪಾಲರು ಕೇಂದ್ರ ಹಾಗೂ ವಿಪಕ್ಷಗಳ ನಿರ್ದೇಶನದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗಲಿದೆ. ಬಿಜೆಪಿ ನಾಯಕರು ಯಾವ ಆಧಾರದ ಮೇಲೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಪಾಲರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ ನೀಡುತ್ತಿದೆ. ಉತ್ತಮ ಆಡಳಿತಕ್ಕೆ ಅಡ್ಡಿಪಡಿಸುತ್ತಿದೆ ಎಂದು ಚಾಟಿ ಬೀಸಿದರು.
ಕಳೆದ ೭-೮ ವರ್ಷಗಳಿಂದ ಬಿಜೆಪಿ ಸ್ವಾಯತ್ತ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ತನಿಖಾ ಸಂಸ್ಥೆಗಳನ್ನು ಆಳುವ ಸರ್ಕಾರದ ವಿರುದ್ಧ ಬಳಸುತ್ತಿದೆ ಎಂದ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದರು.