ನಿಸ್ವಾರ್ಥದ ಹೋರಾಟದಿಂದ ನಮಗೆ ಸ್ವಾತಂತ್ರ್ಯ
ಕೆಂಗೇರಿ, ಆ.೧೭ :ದೇಶದ ಹಿತಕ್ಕಾಗಿ ಸರ್ವಸ್ವ ವನ್ನು ತ್ಯಾಗ ಮಾಡಿ ನಿಸ್ವಾರ್ಥದಿಂದ ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ತತ್ವ ಸಿದ್ಧಾಂತಗಳು ನಮ್ಮೆಲ್ಲರಿಗೂ ದಾರಿದೀಪವಾಗಬೇಕಾಗಿದೆ ಎಂದು ಕುಂಬಳಗೂಡು ಗ್ರಾಮ ಪಂಚಾಯತಿ ಅಧ್ಯಕ್ಷ ಎನ್. ದೇವರಾಜು ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ಕುಂಬಳಗೂಡು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ದಬ್ಬಾಳಿಕೆ, ದೌರ್ಜನ್ಯಕ್ಕೆ ಎದೆಗುಂದದೆ ಅಹಿಂಸಾ ಮಾರ್ಗದ ಮೂಲಕ ಮಹಾತ್ಮ ಗಾಂಧೀಜಿ ಹಾಗೂ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯದ ಮಹತ್ವವನ್ನು ಇಂದಿನ ಪೀಳಿಗೆಗೆ ಮಾಹಿತಿ ನೀಡಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಬ್ರಿಟಿಷರ ಗುಂಡಿ ನೇಟಿಗೂ ಜಗ್ಗದೆ ದೇಶಕ್ಕಾಗಿ ಸ್ವಾಭಿಮಾನದಿಂದ,ಕೆಚ್ಚೆದೆಯಿಂದ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಬೇಕೆಂಬ ಏಕೈಕ ಉದ್ದೇಶದಿಂದ ಹೋರಾಟ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರು ನಮ್ಮೆಲ್ಲರಿಗೂ ಮಾದರಿ ಹಾಗೂ ದಾರಿದೀಪವಾಗಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರು ಕಂಡ ಸಮರ್ಥ,ಸದೃಢ ಅಖಂಡ ಭಾರತದ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಕುಂಬಳಗೋಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚಿಕ್ಕರಾಜು,ಮಣ್ಣಿನ ಮಗ ರಾಮಕೃಷ್ಣ, ಎನ್. ನರಸಿಂಹಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಅನೀಸ್, ತಾಲೂಕ್ ಪಂಚಾಯತಿ ಮಾಜಿ ಸದಸ್ಯ ಕೃಷ್ಣಪ್ಪ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
