ಸಾಕ್ಷ್ಯಾಧಾರ ಕೊರತೆ ೪೦ ವರ್ಷಗಳ ಬಳಿಕ ಆರೋಪಿ ಖುಲಾಸೆ
ಮುಂಬೈ,ಆ.೧೬-ನಾಲ್ಕು ದಶಕಗಳಷ್ಟು ಹಳೆಯದಾದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಂಬೈ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ.
ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಕಳೆದ ೪೦ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶದ ಆಗ್ರಾದ ೭೦ ವರ್ಷದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಪಾಪಾ ಅಲಿಯಾಸ್ ದಾವೂದ್ ಬಂಡು ಖಾನ್ ಎಂದು ಗುರುತಿಸಲಾಗಿದೆ. ಆರೋಪಿ ೧೯೮೬ರಲ್ಲಿ ತಲೆಮರೆಸಿಕೊಂಡಿದ್ದು, ಕೊನೆಗೆ ೨೦೨೪ರಲ್ಲಿ ಉತ್ತರ ಪ್ರದೇಶದಿಂದ ಸಿಕ್ಕಿಬಿದ್ದಿದ್ದ.
ಮಾಹಿತಿಯ ಪ್ರಕಾರ, ೧೯೮೪ ರಲ್ಲಿ, ಮಹಿಳೆಯ ದೂರಿನ ಆಧಾರದ ಮೇಲೆ, ದಾವೂದ್ ಬಂಡು ಖಾನ್ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದೆ. ಆ ಸಮಯದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು, ಆದರೆ ಜಾಮೀನಿನ ಮೇಲೆ ಹೊರಬಂದ ನಂತರ ಆರೋಪಿ ಮುಂಬೈನಿಂದ ಪರಾರಿಯಾಗಿದ್ದು. ನ್ಯಾಯಾಲಯದ ವಿಚಾರಣೆಗೆ ಬರಲೇ ಇಲ್ಲ.೧೯೮೫ ರಲ್ಲಿ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಯಿತು ಆದರೆ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ. ೧೯೮೬ರಲ್ಲಿ ಆರೋಪಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಇದೀಗ ನ್ಯಾಯಾಲಯದ ತನ್ನ ತೀರ್ಪನ್ನು ನೀಡಿದೆ, ನಾಲ್ಕು ದಶಕಗಳ ಕಾಲ ನಡೆದ ವಿಚಾರಣೆಯ ನಂತರ, ಸೆಷನ್ಸ್ ಕೋರ್ಟ್ ಖಾನ್ ನನ್ನು ಖುಲಾಸೆಗೊಳಿಸಿದೆ,
ಆರೋಪಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆ ಸಮಯದಲ್ಲಿ ಬಾಲಕಿ ಅಪ್ರಾಪ್ತಳಾಗಿದ್ದಳು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ತರಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಧೀಶರಾದ ಮಾಧುರಿ ಎಂ ದೇಶಪಾಂಡೆ, ’ಪ್ರಕರಣ ಬಹಳ ಹಳೆಯದು. ಆರೋಪಿ ಬಂಧನದಲ್ಲಿದ್ದಾನೆ. ಆದ್ದರಿಂದ ಪ್ರಕರಣ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಪಿ ಖುಲಾಸೆಗೊಳ್ಳಲು ಅರ್ಹರು ಎಂದು ಹೇಳಿದ್ದಾರೆ.