೩೫ ಮಂದಿ ರಕ್ಷಿಸಿದ ನರ್ಸ್‌ಗೆ ಚಾವ್ಲಾ ಪ್ರಶಸ್ತಿ
ಚೆನ್ನೈ,ಆ.೧೬-ಭಾರತವನ್ನೇ ತಲ್ಲಣಗೊಳಿಸಿದ ವಯನಾಡು ಭೂಕುಸಿತದ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ರಭಸದಿಂದ ಹರಿಯುವ ನದಿಯನ್ನು ಎಚ್ಚರಿಕೆಯಿಂದ ಜಿಪ್‌ಲೈನ್ ಸಹಾಯದಿಂದ ಸತತ ಮಳೆಯ ನಡುವೆ ರೈನ್‌ಕೋಟ್ ಧರಿಸಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಬಿಗಿಯಾಗಿ ಹಿಡಿದು ಜಿಪ್‌ಲೈನ್ ಮೂಲಕ ಧೈರ್ಯದಿಂದ ನದಿ ದಾಟಿ, ಸವಾಲುಗಳನ್ನು ಮೆಟ್ಟಿ ನಿಂತ ನರ್ಸ್ ಎ.ಸಬೀನಾ ನದಿ ದಾಟಿ ಅಲ್ಲಿನ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದಾರೆ.೩೦ ರಿಂದ ೩೫ ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಅವರ ಪ್ರಾಣ ಕಾಪಾಡಿದ್ದಾರೆ.
ವಯನಾಡಿನ ಮೆಪ್ಪಾಡಿ ಮುಂಡಕೈ ಭೂಕುಸಿತದಲ್ಲಿ ಗಾಯಗೊಂಡವರಿಗೆ ದಿಟ್ಟ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಥಮ ಚಿಕಿತ್ಸೆ ನೀಡಿದ ನರ್ಸ್ ಎ ಸಬೀನಾ ಅವರಿಗೆ ತಮಿಳುನಾಡು ಸರ್ಕಾರ ಗೌರವ ಸಲ್ಲಿಸಿದೆ. ತಮಿಳುನಾಡಿನ ನೀಲಗಿರಿ ಮೂಲದ ಸಬೀನಾ ಅವರಿಗೆ ಧೈರ್ಯಕ್ಕಾಗಿ ಕಲ್ಪನಾ ಚಾವ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಲ್ಪನಾ ಚಾವ್ಲಾ ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಬೀನಾ ಅವರಿಗೆ ಪ್ರದಾನ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಭೂಕುಸಿತದ ವಿಷಯ ತಿಳಿದು ಸ್ಥಳಕ್ಕೆ ಬಂದ ಎಸ್‌ಟಿಎಸ್‌ಎಚ್ ಕಾರ್ಯಕರ್ತರೊಂದಿಗೆ ಸಬೀನಾ ಕೂಡ ಇದ್ದರು. ಮೆಡಿಕಲ್ ಕಿಟ್‌ನೊಂದಿಗೆ ಇನ್ನೊಂದು ಕಡೆಗೆ ಹೋಗಲು ಅವರು ಪುರುಷ ನರ್ಸ್‌ಗಳನ್ನು ಹುಡುಕಿದ್ದಾರೆ ಆದರೆ ಯಾರೂ ಸಿಗಲಿಲ್ಲ. ಆಗ ಸಬೀನಾ ಈ ಕಾರ್ಯಕ್ಕೆ ಮುಂದಾಗಿದ್ದಾಳೆ.
ಸಬೀನಾ ಎಎನ್‌ಎಂ ತರಬೇತಿಯಲ್ಲಿ ಡಿಪ್ಲೊಮಾ ಹೊಂದಿದ್ದು, ನೀಲಗಿರಿ ಜಿಲ್ಲೆಯ ಕೂಡಲೂರಿನಲ್ಲಿರುವ ಎನ್‌ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಬೀನಾ ಅವರ ಈ ಸಾಧನೆಗೆ ಸಾಮಾಜಿಕ ಮಾಧ್ಯಮ ಸೇರಿದಂತೆ ಅನೇಕ ಭಾಗಗಳಿಂದ ಶ್ಲಾಘನೆ ವ್ಯಕ್ತವಾಗಿದೆ.