ಪ್ರತಿದಿನ ಹೊಸ ವಿಷಯ ಕಲಿಯಬೇಕು
ಬೆಂಗಳೂರು,ಆ.೧೪- ಪ್ರತಿ ಮನುಷ್ಯನು ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವ ಮೂಲಕ ದೇಶವನ್ನು ಮುನ್ನಡೆಸಬೇಕು ಏಕೆಂದರೆ ಸಾಧನೆಗೆ ಕೊನೆಯಿಲ್ಲ, ಎಂದು ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ, ಚಂದ್ರಯಾನ-೩ ಹಿರಿಯ ಇಸ್ರೋ ವಿಜ್ಞಾನಿ ಎಂ.ಶಂಕರನ್ ಹೇಳಿದ್ದಾರೆ.
ರಾಜ್ಯ ಜಲಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜಲ ವಿಜ್ಞಾನ ಯೋಜನೆ, ಭಾರತೀಯ ಜಲ ಸಂಪನ್ಮೂಲ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಮಾತನಾಡಿದ ಅವರು ಮಾತನಾಡಿದ್ದಾರೆ .ಚಂದ್ರಯಾನ-೩ ಯಶಸ್ವಿ ಉಡಾವಣೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.ಅಷ್ಟಕ್ಕೆ ನಾವು ಸುಮ್ಮನಿರಬಾರದು. ಪ್ರತಿ ವರ್ಷ ನಾವು ಏನನ್ನಾದರೂ ಸಾಧಿಸಬೇಕು. ವಿಶೇಷವಾಗಿ ಯುವಜನರು ತಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು ಎಂದು ಹೇಳಿದ್ದಾರೆ.
ಇಸ್ರೋ ಸಾಕಷ್ಟು ಸಾಧನೆ ಮಾಡಿದೆ. ಅದು ಏನು ಮಾಡಿದರೂ ಇಡೀ ಜಗತ್ತು ಅದನ್ನು ಗುರುತಿಸುತ್ತದೆ. ಭಾರತೀಯ ಬಾಹ್ಯಾಕಾಶದ ಪಿತಾಮಹ ಎಂದು ಕರೆಯಲ್ಪಡುವ ಡಾ. ವಿಕ್ರಮ ಸಾರಾಬಾಯಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸ್ಥಾಪಕರು. ಮುಂದಿನ ವರ್ಷದ ವೇಳೆಗೆ ಅತ್ಯಂತ ದುಬಾರಿ ಉಪಗ್ರಹ ಎಂದೇ ಖ್ಯಾತಿ ಪಡೆದಿರುವ ನಿಸಾರ್ ಇಸ್ರೋ-ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎರಡು ಬಿಲಿಯನ್ ಡಾಲರ್ ವೆಚ್ಚವಾಗಲಿದೆ. ೨೦೪೬ ರ ವೇಳೆಗೆ ಮಾನವನ ಪ್ರವೇಶ ಮತ್ತು ಚಂದ್ರನಿಂದ ನಿರ್ಗಮಿಸಲು ಎಲ್ಲಾ ಸಿದ್ಧತೆಗಳನ್ನು ಮಾಡುವುದು ಮುಂದಿನ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಡಬ್ಲ್ಯುಸಿ ಮುಖ್ಯ ಇಂಜಿನಿಯರ್ ವೀರೇಂದ್ರ ಶರ್ಮಾ, ಕಳೆದ ವರ್ಷ ಆಗಸ್ಟ್ ೨೩ ರಂದು ನಾವು ಚಂದ್ರಯಾನ-೩ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದೇವೆ. ಪ್ರತಿ ವರ್ಷ ಈ ದಿನದಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲು ನಾವು ನಿರ್ಧರಿಸಿದ್ದೇವೆ. ಪ್ರಸ್ತುತ ದಿನಗಳಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಅನಾವೃಷ್ಟಿ ಹೀಗೆ ಹಲವು ಸಮಸ್ಯೆಗಳಿವೆ. ಜಲಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಉಪಗ್ರಹಗಳಿಂದ ಬೆಳೆ ತೇವಾಂಶ ಮತ್ತು ಹವಾಮಾನ ವೈಪರೀತ್ಯದಂತಹ ಅಂಶಗಳನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದ್ದಾರೆ.