ಅರ್ಷದ್‌ಗೆ ಆಲ್ಟೊ ಕಾರು ಉಡುಗೊರೆ ನೆಟ್ಟಿಗರ ಆಕ್ರೋಶ
ನವದೆಹಲಿ,ಆ.೧೩-ನೀರಜ್ ಚೋಪ್ರಾರನ್ನು ಸೋಲಿಸಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪಾಕಿಸ್ತಾನದ ಅರ್ಷದ್ ನದೀಮ್ ಕಳೆದ ವಾರ ಪ್ಯಾರಿಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ೯೨.೯೭ ಮೀಟರ್‌ಗಳ ದಾಖಲೆ ಮುರಿದು ಅಥ್ಲೆಟಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಒಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದು ೧೯೯೨ ರ ಬಾರ್ಸಿಲೋನಾ ಒಲಿಂಪಿಕ್ಸ್ ನಂತರ ಪಾಕಿಸ್ತಾನಕ್ಕೆ ಮೊದಲ ವೈಯಕ್ತಿಕ ಪದಕವನ್ನು ತಂದಿದೆ. ಈ ಸಾಧನೆಯ ನಂತರ ಅರ್ಷದ್ ನದೀಮ್ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಮಧ್ಯೆ ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಅಲಿ ಶೇಖಾನಿ, ಅರ್ಷದ್ ನದೀಮ್‌ಗೆ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ತುತ್ತಾಗಿದ್ದಾರೆ.ಇದು ಅಪಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಅರ್ಷದ್ ನದೀಮ್‌ಗೆ ಸುಜುಕಿ ಆಲ್ಟೊವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ಪಾಕಿಸ್ತಾನದ ಇಂಟರ್ನೆಟ್ ಬಳಕೆದಾರರಾದ ಸೈಯದ್ ಜಾಫರ್ ಅಬ್ಬಾಸ್ ಜಾಫ್ರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಉದ್ಯಮಿ ಅಲಿ ಶೇಖಾನಿ ನದೀಮ್ ಅರ್ಷದ್ ನದೀಮ್‌ಗೆ ಹೊಚ್ಚ ಹೊಸ ಆಲ್ಟೊ ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಬರೆದಿದ್ದಾರೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅರ್ಷದ್ ನದೀಮ್ ಅವರ ಅಭಿಮಾನಿಗಳು ಉದ್ಯಮಿಗೆ ಈ ಸಾಧಾರಣ ಮತ್ತು ಹಳೆಯ ಹ್ಯಾಚ್‌ಬ್ಯಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಗೇಲಿ ಮಾಡಿದ್ದಾರೆ. ಸುಜುಕಿ ಆಲ್ಟೊ ಬೆಲೆ ಪಾಕಿಸ್ತಾನಿ ರೂಪಾಯಿಗಳಲ್ಲಿ ೨೩.೩೧ ಲಕ್ಷ ರೂಪಾಯಿಗಳು ಆದರೆ ಭಾರತೀಯ ರೂಪಾಯಿಗಳಲ್ಲಿ ಈ ಕಾರಿನ ಬೆಲೆ ೭ ಲಕ್ಷ ರೂಪಾಯಿಗಳಿಗಿಂತ ಸ್ವಲ್ಪ ಹೆಚ್ಚು ಎನ್ನಲಾಗಿದೆ.
ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ.
ಕರಾಚಿಯ ನಿವಾಸಿ ತೈಮೂರ್ ಎಚ್, ಅವರಿಗೆ ಕಾರು ನೀಡುವ ಬದಲು ಆಹಾರ, ತರಬೇತಿ ಮತ್ತು ಬೆಂಬಲದೊಂದಿಗೆ ಪ್ರಾಯೋಜಕತ್ವವನ್ನು ಏಕೆ ನೀಡಬಾರದು, ಇದು ಅವನಿಗೆ ಹೆಚ್ಚಿನ ವಿಶ್ವ ದಾಖಲೆಗಳನ್ನು ಮುರಿಯಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಐಟಿ ವೃತ್ತಿಪರ ರಾಹುಲ್ ಜೈನ್, ’ಇದು ಅವಮಾನ… ಅವರು ಬಿಎಂಡಬ್ಲ್ಯು ಅಥವಾ ಆಡಿಗೆ ಅರ್ಹರು ಎಂದು ಬರೆದುಕೊಂಡಿದ್ದಾರೆ.