ನಟಿ ಶಬಾನಾ ಅಜ್ಮಿ ಸೇರಿ ಹಲವರಿಗೆ ಡಾಕ್ಟರೆಟ್
ಕೋಲ್ಕತ್ತಾ,ಅ.೧೩-ಬಾಲಿವುಡ್ ನಟಿ ಶಬಾನಾ ಅಜ್ಮಿ ಮತ್ತು ಸಂಗೀತಗಾರ ಶಂಕರ್ ಮಹಾದೇವನ್ ಭಾರತದ ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಕೋಲ್ಕತ್ತಾದ ಪ್ರಮುಖ ವಿಶ್ವವಿದ್ಯಾನಿಲಯವಾದ ಟೆಕ್ನೋ ಇಂಡಿಯಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಶಂಕರ್ ಮಹದೇವನ್ ಈ ದಿನ ಬಹಳ ವಿಶೇಷವಾಗಿತ್ತು ಎಂದಿದ್ದಾರೆ. ಶಬಾನಾ ಅಜ್ಮಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಶಂಕರ್ ಮಹದೇವನ್ ಸಂತಸ ವ್ಯಕ್ತಪಡಿಸಿ ಇದು ನನಗೆ ಬಹಳ ವಿಶೇಷವಾದ ದಿನ. ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಟೆಕ್ನೋ ಇಂಡಿಯಾದಿಂದ ಈ ಡಾಕ್ಟರೆಟ್ ಪಡೆದಿರುವುದಕ್ಕೆ ನಾನು ಸಂಪೂರ್ಣ ಕೃತಜ್ಞತೆ ಮತ್ತು ಗೌರವವನ್ನು ಅನುಭವಿಸುತ್ತೇನೆ. ನಾನು ಅದನ್ನು ಪಡೆದಿದ್ದು ಜನರ ಕಾರಣದಿಂದಾಗಿ, ನನಗೆ ಈ ಗೌರವ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಶ್ರಮವಹಿಸಿ, ಮನರಂಜನೆಗಾಗಿ ಮಾತ್ರವಲ್ಲದೆ ಮಾನವೀಯತೆಯ ಒಳಿತಿಗಾಗಿ ಸಂಗೀತವನ್ನು ಸಾಧನವಾಗಿ ಬಳಸಿಕೊಳ್ಳುವ ಜವಾಬ್ದಾರಿಯೂ ಇದೆ ಎಂದಿದ್ದಾರೆ.
ಈ ವೇಳೆ ಅವರು ಲಕ್ಷ್ಯ ಚಿತ್ರದ ತಮ್ಮ ಹಾಡನ್ನು ಹಾಡಿ ವಿದ್ಯಾರ್ಥಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಶಬಾನಾ ಅಜ್ಮಿ ಮಾತನಾಡಿ ಟೆಕ್ನೋ ಇಂಡಿಯಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೆಟ್ ಸ್ವೀಕರಿಸಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ,ಇದು ನನಗೊಂದು ಜವಾಬ್ದಾರಿಯನ್ನು ಕೊಡುತ್ತದೆ. ಕಲೆಯನ್ನು ಸಾಮಾಜಿಕ ಬದಲಾವಣೆಗೆ ಒಂದು ಸಾಧನವಾಗಿ ಬಳಸಬಹುದು ಎಂದು ನಾನು ಭಾವಿಸುತ್ತೇನೆ ಮತ್ತು ಅದನ್ನು ನಾನು ಸಣ್ಣ ರೀತಿಯಲ್ಲಿ ಮಾಡಲು ಪ್ರಯತ್ನಿಸಿದೆ ಎಂದಿದ್ದಾರೆ.
ಶಬಾನಾ ಅಜ್ಮಿ ಇನ್ಸ್ಟಾಗ್ರಾಮ್‌ನಲ್ಲಿ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಮ್ಮುಖದಲ್ಲಿ ಗೌರವ ಡಾಕ್ಟರೆಟ್ ಪದವಿಯನ್ನು ಸ್ವೀಕರಿಸಿದಕ್ಕೆ ತಮ್ಮ ಅಪಾರ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಎಲ್ಲರೂ ಅವರನ್ನು ಅಭಿನಂದಿಸುತ್ತಿದ್ದಾರೆ.