ಭರತನಾಟ್ಯ ಪ್ರದರ್ಶಿಸಿ ದಾಖಲೆ ಬರೆದ ಚೀನಾ ಬಾಲೆ
ಹೊಸದಿಲ್ಲಿ, ಆ.೧೩: ವಿದೇಶಗಳಲ್ಲಿ ಭಾರತೀಯ ಸಂಪ್ರದಾಯಗಳಿಗೆ ಹೆಚ್ಚಿನ ಗೌರವವಿದೆ. ವಿದೇಶಿಗರಿಗೆ ನಮ್ಮ ಆಚಾರ-ವಿಚಾರಗಳು ತುಂಬಾ ಇಷ್ಟ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ನೆರೆಯ ಚೀನಾದಲ್ಲೂ ನಮ್ಮ ಸಾಂಪ್ರದಾಯಿಕ ನೃತ್ಯ ಜನಪ್ರಿಯವಾಗುತ್ತಿದೆ. ಚೀನಾದ ಹುಡುಗಿಯರು ಭರತ ನಾಟ್ಯ ಕಲಿಯಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇತ್ತೀಚೆಗೆ, ಚೀನಾದ ಹುಡುಗಿ ಲೀ ಮುಜಿ (೧೩) ಬೀಜಿಂಗ್‌ನಲ್ಲಿ ತನ್ನ ಚೊಚ್ಚಲ (ಅರಂಗೇಟ್ರಂ) ಪಾದಾರ್ಪಣೆ ಮಾಡಿದ್ದಾರೆ. ಅಂದಹಾಗೆ ಚೀನಾದಲ್ಲಿ ಭರತ ನೃತ್ಯ ಕಲಿತು ಏಕಾಂಗಿಯಾಗಿ ಪಾದಾರ್ಪಣೆ ಮಾಡಿದ ಮೊದಲ ಹುಡುಗಿ ಎಂಬ ದಾಖಲೆಯನ್ನು ಮೂಜಿ ಸೃಷ್ಟಿಸಿದ್ದಾರೆ.
ಚೀನಾದ ಭಾರತದ ರಾಯಭಾರಿ ಪ್ರದೀಪ್ ರಾವತ್ ಅರ್ಧಾಂಗಿ ಶ್ರುತಿ ರಾವತ್ ಬಾಲಕಿಯನ್ನು ಅಭಿನಂದಿಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಚೆನ್ನೈನಲ್ಲೂ ಮೂಜಿ ಕಾರ್ಯಕ್ರಮ ನಡೆಯಲಿದೆ ಎಂದು ಬಾಲಕಿಯ ಶಿಕ್ಷಕ ಜಿನ್ ಶಾನ್ ಶಾನ್ ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮೂಜಿಗೆ ನೃತ್ಯ ಕಲಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಭರತ ನಾಟ್ಯದಲ್ಲಿ ತರಬೇತಿ ಮುಗಿಸಿದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಶಿಕ್ಷಕರ ಮುಂದೆ ಮತ್ತು ಇತರರ ಮುಂದೆ ಪ್ರದರ್ಶನ ನೀಡುತ್ತಾರೆ. ಚೊಚ್ಚಲ ಪ್ರವೇಶವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಯು ತನ್ನದೇ ಆದ ಪ್ರದರ್ಶನ ನೀಡಲು ಮತ್ತು ಇತರರಿಗೆ ನೃತ್ಯವನ್ನು ಕಲಿಸಲು ಗುರುಗಳಿಂದ ಅನುಮತಿ ಪಡೆಯುತ್ತಾನೆ. ಲಿ ಮುಜಿ ಅವರ ಗುರುಗಳಾದ ಜಿನ್ ಶಾನ್ ಶಾನ್ ಅವರು ಭರತ ನಾಟ್ಯ ಕಲಿಯುವ ಆಸಕ್ತಿಯಿಂದ ಚೆನ್ನೈಗೆ ಬಂದು ನೃತ್ಯವನ್ನು ಕಲಿತಿದ್ದಾರೆ .ನಂತರ ೧೯೯೯ರಲ್ಲಿ ದೆಹಲಿಯಲ್ಲಿ ಪ್ರಥಮ ಬಾರಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಅದರ ನಂತರ, ಅವರು ಚೀನಾಕ್ಕೆ ಹೋಗಿ ನೃತ್ಯ ಶಾಲೆಯನ್ನು ಸ್ಥಾಪಿಸಿದರು ಮತ್ತು ಚೀನಾದ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿದ್ದಾರೆ.