ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಆಗ್ರಹ
ನವದೆಹಲಿ,ಆ.೧೩- ಬಾಂಗ್ಲಾದೇಶದಲ್ಲಿ ಅಶಾಂತಿ ತಲೆದೋರಿರುವ ಹಿನ್ನೆಲೆಯಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ತಡೆಯಲು ಅಗತ್ಯಕ್ರಮ ತೆಗೆದುಕೊಳ್ಳುವಂತೆ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂಸಾಚಾರದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಕನಿಷ್ಠ ಇಬ್ಬರು ಹಿಂದೂ ನಾಯಕರು ಹತ್ಯೆಯಾಗಿದ್ದಾರೆ. ಜೊತೆಗೆ ಹಿಂದೂಗಳ ಮನೆಗಳು, ಕಟ್ಟಡ, ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಯುತ್ತಿದ್ದು ಕೇಂದ್ರಸರ್ಕಾರ ಮಧ್ಯ ಪ್ರವೇಶ ಮಾಡಿ ಹಿಂದೂಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವುಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಅವರ ಜಾತಿ ಮತ್ತು ವರ್ಗವನ್ನು ಲೆಕ್ಕಿಸದೆ ಇತ್ತೀಚೆಗೆ ಹಿಂಸಾಚಾರ ಹೆಚ್ಚಾಗುತ್ತಿರುವುದು ತುಂಬಾ ದುಃಖಕರ ಮತ್ತು ಕಳವಳಕಾರಿ ಸಂಗತಿ ಎಂದಿದ್ದಾರೆ.
ಪ್ರಸ್ತುತ ಮಹತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವ ಬಾಂಗ್ಲಾದೇಶ ಇತ್ತೀಚೆಗೆ ವ್ಯಾಪಕ ಹಿಂಸಾಚಾರಕ್ಕೆ ಸಿಲುಕಿ ನಲುಗಿದೆ. ಹಲವಾರು ಹಿಂದೂ ದೇವಾಲಯಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
೫೦೦ ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾದ ಬೃಹತ್ ಪ್ರತಿಭಟನೆಗಳು ಮತ್ತು ಹಿಂಸಾಚಾರದ ನಂತರ, ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ್ದಾರೆ. ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಡಾ.ಮೊಹಮ್ಮದ್ ಯೂನಸ್ ಹೊಸದಾಗಿ ಸ್ಥಾಪಿಸಲಾದ ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿದ ನಂತರವೂ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಇದನ್ನು ಕೂಡಲೇ ನಿಲ್ಲಿಸಲು ಮುಂದಾಗುವ ಅಗತ್ಯವಿದೆ ಎಂದಿದ್ದಾರೆ