ಟಿಬಿ ಡ್ಯಾಂ ಗೇಟ್ ಚೈನ್ ಕಟ್
ಹೊಸಪೇಟೆ ಆ೧೧: ತುಂಗಭದ್ರಾ ಜಲಾಶಯದಲ್ಲಿನ ನೀರಿನ ಒತ್ತಡಕ್ಕೆ ಡ್ಯಾಂನ ಗೇಟ್ ಸಂಖ್ಯೆ ೧೯ರ ಚೈನ್ ಲಿಂಕ್ ತುಂಡಾಗಿ ಗೇಟ್ ನದಿ ಪಾಲಾಗಿದ್ದು. ಡ್ಯಾಂನಿಂದ ನೀರು ನದಿಗೆ ರಭಸವಾಗಿ ನುಗ್ಗುತ್ತಿದೆ. ನೀರಿನ ಹೊರ ಹರಿವಿನ ಪ್ರಮಾಣ ೨ಲಕ್ಷ ಕ್ಯುಸೆಕ್ ಹೊರಹರಿವು ಮಾಡಬೇಕಾಗುತ್ತದೆ ಆದ್ದರಿಂದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಾರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಸುತ್ತಮುತ್ತಲ ೪ ಜಿಲ್ಲೆಗಳ ರೈತರ ಮೊಗದಲ್ಲಿ ಸಂತಸದ ಹೊನಲೇ ಹರಿದಿತ್ತು.ಆದರೆ, ಈಗ ೧೦೫ ಅಡಿ ಟಿಎಂಸಿ ನೀರಿನ ಸಾಮರ್ಥ್ಯವಿದೆ.ಈಗ ಜಲಾಶಯದಿಂದ ೬೫ ಟಿಎಂಸಿ ನೀರು ಹೊರ ಬಿಟ್ಟರೆ ರೈತರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಕಂಪ್ಲಿ ಪಟ್ಟಣ ಜಲಾವೃತಗೊಳ್ಳುವ ಆತಂಕವೂ ಎದುರಾಗಿದೆ.
ಕ್ರಸ್ಟ್ ಗೇಟ್ ತುಂಡಾಗಿರುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಜಲಾಶಯದ ಆಸುಪಾಸಿನಲ್ಲಿ ಯಾರೂ ತೆರಳದಂತೆಯೂ ಕಟ್ಟೆಚ್ಚರ ವಹಿಸಲಾಗಿದೆ.ಗೇಟ್ ಚೈನ್‌ಲಿಂಕ್ ಕಟ್ಟಾಗಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೈನ್ ಲಿಂಕ್ ತುಂಡಾದ ಈ ಗೇಟ್‌ನಿಂದಲೇ ಅಂದಾಜು ೩೫ ಸಾವಿರದಿಂದ ೪೦ ಸಾವಿರ ಕ್ಯುಸೆಕ್ ನೀರು ನದಿಗೆ ಹೋಗುತ್ತಿದೆ. ಉಳಿದ ಗೇಟ್‌ಗಳಿಂದ ೭೫ ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ.
ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದು, ಡ್ಯಾಂನಲ್ಲಿನ ನೀರು ಕಡಿಮೆಯಾದ ಬಳಿಕವಷ್ಟೇ ತುಂಡಾದ ಚೈನ್ ಲಿಂಕ್ ಮತ್ತು ಗೇಟ್ ಸರಿಪಡಿಸಲು ಸಾಧ್ಯವಾಗುತ್ತದೆ. ದುರಸ್ತಿಗೆ ಅಗತ್ಯವಾಗಿ ಬೇಕಾದ ನೀರು ಕಡಿಮೆಯಾಗಲು ಕನಿಷ್ಠ ೩-೪ ದಿನವಾದರೂ ಬೇಕು ಎಂದುಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಎಲ್. ಬಸವರಾಜ್ ತಿಳಿಸಿದ್ದಾರೆ.
ಪ್ರತಿವರ್ಷವೂ ಜಲಾಶಯದ ಗೇಟ್‌ಗಳ ನಿರ್ವಹಣೆ ಮಾಡಲಾಗುತ್ತದೆ. ಜಲಾಶಯದ ಸುರಕ್ಷತೆಗೆ ಯಾವುದೇ ತೊಂದರೆಯಿಲ್ಲ. ಆತಂಕಗೊಳ್ಳುವ ಅಗತ್ಯವೂ ಇಲ್ಲ. ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಈಗಿನ ನೀರಿನಲ್ಲಿ ಆಗಿರುವ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆಯೊ ಇಲ್ಲವೊ ಎನ್ನುವುದನ್ನು ತಜ್ಞರ ತಂಡ ನಿರ್ಧಾರ ಮಾಡಲಿದೆ. ಸದ್ಯ ೭೦ ಸಾವಿರ ಕ್ಯುಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಜಲಾಶಯದ ಸಂಪೂರ್ಣ ಭರ್ತಿಯಾಗಿ ಕಳೆದ ವಾರ ಹತ್ತು ದಿನಗಳಿಂದಲೂ ನೀರು ಹೊರಹೋಗುತ್ತಿತು. ೧೦೫.೭೮೮ ಟಿಎಂಸಿ ಅಡಿನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಸಚಿವ ಶಾಸಕರ ಭೇಟಿ:
ಜಲಾಶಯಕ್ಕೆ ಇಂದು ಬೆಳಗಿನ ಜಾವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೇಟಿ ನೀಡಿದರು.
ಸಚಿವ ಶಿವರಾಜ್ ತಂಗಡಗಿ ‘೧೯ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದಿರುವ ಕಾರಣ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸದ್ಯದ ಮಟ್ಟಿಗೆ ೬೦ರಿಂದ ೬೫ ಟಿಎಂಸಿ ಅಡಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. ಕನಿಷ್ಠ ೨೦ ಅಡಿ ನೀರು ಖಾಲಿಯಾದರೆ ಮಾತ್ರ ನಿಖರವಾಗಿ ಸಮಸ್ಯೆ ಏನಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ.
‘ಆಣೆಕಟ್ಟು ಕಟ್ಟಿದ ವಿನ್ಯಾಸವನ್ನು ತರಿಸಿಕೊಳ್ಳಲಾಗಿದ್ದು, ನೀರಿನ ರಭಸ ಹೆಚ್ಚಿರುವ ಕಾರಣ ಕೆಳಗಡೆ ಇಳಿದು ಕೆಲಸ ಮಾಡಲು ಆಗುವುದಿಲ್ಲ. ಸದ್ಯಕ್ಕೆ ಒಂದು ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ನೀರು ಹೊರಬಿಡುವ ಪ್ರಮಾಣ ೨.೫೦ ಲಕ್ಷ ಕ್ಯುಸೆಕ್ ದಾಟಿದರೆ ಮಾತ್ರ ಜನರಿಗೆ ತೊಂದರೆಯಾಗುತ್ತದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ ಕಡಿಮೆ ಸಮಯದಲ್ಲಿ ಸಮಸ್ಯೆ ಪರಿಹರಿಸಲು ಬೆಂಗಳೂರು, ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಬರಲಿದೆ. ಬಳಿಕ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ವೆಲ್ಡಿಂಗ್ ಬಿಟ್ಟಿದ್ದೇ ಗೇಟ್ ಕುಸಿತಕ್ಕೆ ಕಾರಣ
ತುಂಗಭದ್ರಾ ಅಣೆಕಟ್ಟೆಯ ೧೯ನೇ ಸಂಖ್ಯೆಯ ಕ್ರಸ್ಟ್ ಗೇಟ್‌ನಲ್ಲಿ ಚೈನ್‌ಲಿಂಕ್ ಬೆಸುಗೆ (ವೆಲ್ಡಿಂಗ್) ಬಿಟ್ಟಿದ್ದೇ ಗೇಟ್ ಸಂಪೂರ್ಣ ಕುಸಿಯಲು ಕಾರಣವಾಗಿದೆ. ಅಣೆಕಟ್ಟೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ಸಂಭವಿಸಿದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ ರೆಡ್ಡಿ ತಿಳಿಸಿದರು.
ವೈಕುಂಠ ಅತಿಥಿ ಗೃಹದಲ್ಲಿ ಇಂದು ಬೆಳಿಗ್ಗೆ ಹಿರಿಯ ಅಧಿಕಾರಿಗಳು ಇಂಜಿನಿಯರ್‌ಗಳ ಜತೆ ಸಮಾಲೋಚನೆ ನಡೆಸಿ ಅಣೆಕಟ್ಟೆಯ ಗೇಟ್ ತುಂಡಾಗಿರುವುದನ್ನು ದುರಸ್ಥಿ ಮಾಡುವ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರನ್ನು ಖಾಲಿ ಮಾಡಲು ೩-೪ ದಿನ ಬೇಕಾಗಬಹುದು. ಬದಲಿ ಗೇಟ್ ಅಳವಡಿಸಲು ತಕ್ಷಣವೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ತುಂಗಭದ್ರಾ ಅಣೆಕಟ್ಟೆಯ ಗೇಟ್‌ಗಳ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುತ್ತಿರುತ್ತೇವೆ, ಈ ಬಾರಿಯೂ ಸಹ ಎಲ್ಲ ಪರೀಕ್ಷೆಗಳು ಮಾಡಲಾಗಿತ್ತು. ೧೯ನೇ ಗೇಟ್‌ನಲ್ಲಿ ವೆಲ್ಡಿಂಗ್ ಬಿಟ್ಟುಕೊಂಡು ಚೈನ್‌ಲಿಂಕ್ ತುಂಡಾಗಿದೆ. ೭೦ ವರ್ಷಗಳ ಹಿಂದೆ ಚೈನ್‌ಲಿಂಕ್ ಅಳವಡಿಸಲಾಗಿತ್ತು.
ಈ ಚೈನ್ ಲಿಂಕ್ ತುಂಡಾದರೂ ಕಾರಣ ಏನು ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದೆ.
ಸಂಪೂರ್ಣ ಹೊಸ ಕ್ರಸ್ಟ್‌ಗೇಟ್ ಅಳವಡಿಸಬೇಕಾಗಿದ್ದು, ಇದು ೬೦ ಅಡಿ ಎತ್ತರ ಮತ್ತು ೨೦ ಅಡಿ ಅಗಲದ ಗೇಟ್ ಇದಾಗಿರುತ್ತದೆ. ತಲಾ ೧೨ ಅಡಿ ಅಗಲದ ೫ ಬೃಹತ್ ಕಬ್ಬಿಣದ ಹಲಗೆಗಳನ್ನು ಜೋಡಿಸಿ ಈ ಗೇಟ್ ಸಿದ್ಧಪಡಿಸಲಾಗುತ್ತದೆ. ನೀರು ೨೦ ಅಡಿಯಷ್ಟು ಇಳಿಕೆಯಾದ ಬಳಿಕ ಗೇಟ್ ಅಳವಡಿಸಲಾಗುತ್ತದೆ. _ಒಆರ್‌ಕೆ ರೆಡ್ಡಿ,ತುಂಗಭದ್ರಾ ಮಂಡಳಿ ಕಾರ್ಯದರ್ಶಿ