ಬೆಂಗಳೂರಲ್ಲಿ ವರುಣಾರ್ಭಟ

ಬೆಂಗಳೂರು, ಆ.೧೨- ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ವರುಣ ಅಬ್ಬರಿಸಿದ್ದಾನೆ. ಇಂದು ಬೆಳಗಿನವರೆಗೂ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸಂಭವಿಸಿದೆ. ಸುಮಾರು ೬೦ ಮಿ.ಮೀ.ನಷ್ಟು ಮಳೆ ಸುರಿದಿದ್ದು, ಇನ್ನೂ ೩-೪ ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ತಗ್ಗು ಪ್ರದೇಶಗಳು, ಕೆಳ ಸೇತುವೆಗಳಲ್ಲಿ ಮಂಡಿಯುದ್ಧ ನೀರು ನಿಂತು ಕೆರೆಯಂತಾಗಿದೆ. ವಾಹನ ಸವಾರರು ರಭಸವಾಗಿ ಹರಿಯುತ್ತಿರುವ ಮಳೆ ನೀರಿನಲ್ಲೇ ವಾಹನ ಚಲಾಯಿಸಲು ಪರದಾಡುವಂತಾಗಿತ್ತು.ಬೆಳಿಗ್ಗಿನವರೆಗೂ ಸುರಿದ ಮಳೆಯಿಂದಾಗಿ ನಗರದ ಬಹುತೇಕ ಭಾಗಗಳಲ್ಲಿ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.ಹೆಬ್ಬಾಳ ಮೇಲ್ಸೇತುವೆ, ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯ ವೀರಸಂದ್ರ ಹತ್ತಿರ ಹೊರಹೋಗುವ ವಾಹನಗಳು ದಟ್ಟಣೆಯಲ್ಲಿ ಸಿಲುಕಿದ್ದು, ಈ ರಸ್ತೆಯಲ್ಲಿ ಓಡಾಡುವವರು ಪರ್ಯಾಯ ಮಾರ್ಗಕ್ಕೆ ಮೊರೆ ಹೋದರು.ಇಲ್ಲಿ ಮಾತ್ರವಲ್ಲ ಬಿಬಿಎಂಪಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಸಮಸ್ಯೆ ಎದುರಾಗಿದೆ. ಅನೇಕ ಕಡೆ ವಾಟರ್‌ಲಾಗಿಂಗ್ ಸಮಸ್ಯೆ ಆಗಿದ್ದು, ಹೆಬ್ಬಾಳ, ಮೇಖ್ರಿ ವೃತ್ತ, ನಾಗವಾರ ಕಡೆಗಳಲ್ಲಿ ಚರಂಡಿಗೆ ಬಿದ್ದ ಮಳೆನೀರು ಸರಾಗವಾಗಿ ಹೋಗುವಂತೆ ಪೊಲೀಸರೇ ಕೈಯಿಂದ ಕಸ ಕಡ್ಡಿ ತೆಗೆದರು.
ಎಷ್ಟು ಮಳೆ ಆಗಿದೆ:
ಬೆಂಗಳೂರಿನಲ್ಲಿ ಕಳೆದ ಒಂದು ೨೪ ಗಂಟೆಯಲ್ಲಿ ಕೊಡುಗೆಹಳ್ಳಿಯಲ್ಲಿ ಅತ್ಯಧಿಕ ಮಳೆ ೬೧.೫ ಮಿಲಿ ಮೀಟರ್ ಮಳೆ ದಾಖಲಾಗಿದೆ. ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಆಗಿದೆ. ಉಳಿದಂತೆ ವಿವಿ ಪುರಂ ವ್ಯಾಪ್ತಿಯಲ್ಲಿ ೫೭.೫ ಮಿ.ಮೀ., ವಿದ್ಯಾಪೀಠ ೫೬ಮಿ.ಮೀ., ನಾಯಂಡಹಳ್ಳಿ ೫೫ಮಿ.ಮೀ., ಹಗದೂರು ೫೪ಮಿ.ಮೀ., ರಾಜರಾಜೇಶ್ವರಿ ನಗರ ೫೩ಮಿ.ಮೀ.ಚೌಡೇಶ್ವರಿ ೫೧.೫ಮಿ.ಮೀ., ವಿ.ನಾಗೇನಹಳ್ಳಿ ೫೦.೫ಮಿ.ಮೀ., ರಾಜರಾಜೇಶ್ವರಿ ನಗರ (೨)೫೦.೫ ಮಿ.ಮೀ, ಪುಲಕೇಶಿ ನಗರ ೪೯.೫ಮಿ.ಮೀ, ಯಲಹಂಕ ೪೯ಮಿ.ಮೀ, ಅರಕೆರೆ ೪೮.೫ ಮಿ.ಮೀ, ದೊಡ್ಡಾನೆಕ್ಕುಂದಿ ೪೫ ಮಿ.ಮೀ, ಎಚ್‌ಎಸ್‌ಆರ್ ಬಡಾವಣೆ ಮತ್ತು ನಾಗಪುರದಲ್ಲಿ ೪೪ ಮಿಲಿ ಮೀಟರ್ ಮಳೆ ದಾಖಲಾಗಿದೆ.ಸತತ ೪-೫ ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು. ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ೩ ರಿಂದ ೪ ಅಡಿಗಳಷ್ಟು ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಈ ಭಾಗದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೆ ರಸ್ತೆಗಳು ಜಲಾವೃತಗೊಂಡವು. ಪ್ರತಿ ಬಾರಿಯೂ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.ಭಾರಿ ಮಳೆಯಿಂದಾಗಿ ಬೆಂಗಳೂರು ಹೊರವಲಯದಲ್ಲೂ ಅವಾಂತರ ಸೃಷ್ಟಿಯಾಗಿದೆ.ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ಕಮ್ಮಸಂದ್ರದ ಡ್ಯಾಡಿಸ್ ಗಾರ್ಡನ್ ಲೇಔಟ್‌ನಲ್ಲಿ ಜಲದಿಗ್ಭಂದನವಾಗಿದೆ. ವರುಣನ ಅಬ್ಬರಕ್ಕೆ ಇಡೀ ಬಡಾವಣೆ ಸಂಪೂರ್ಣ ಜಲಾವೃತವಾಗಿವೆ. ಮನೆಯಿಂದ ನಿವಾಸಿಗಳು ಹೊರಬರಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಸ್ಥಳಕ್ಕೆ ಅಗ್ನಿಶಾಮಕ ತಂಡ ದೌಡಾಯಿಸಿ ಮಳೆ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿರತರಾದರು.ಇನ್ನೊಂದೆಡೆ ಆನೇಕಲ್ ಪಟ್ಟಣದ ಗೋಪಾಲರಾಜು ಕಾಲೇಜು ರಾತ್ರಿ ಸುರಿದ ಮಳೆಗೆ ಜಲಾವೃತಗೊಂಡಿದೆ. ಇದರಿಂದಾಗಿ ಎಂದಿನಂತೆ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜಯದೇವ ಅಂಡರ್‌ಪಾಸ್‌ನಲ್ಲಿ ನದಿಯಂತೆ ಹರಿಯುತ್ತಿರುವ ನೀರಿನಲ್ಲೇ ದ್ವಿಚಕ್ರ ವಾಹನ ಸವಾರರೊಬ್ಬರು ಪರದಾಡುತ್ತಿರುವ ದೃಶ್ಯ.
ಸಂಜೆ ಮಳೆ ನಿರೀಕ್ಷೆ
ಇಂದು ಬೆಳಿಗ್ಗೆ ಚುಮು ಚುಮು ಚಳಿ ಜೊತೆಗೆ ಆಗಾಗ ಜಿಟಿ ಜಿಟಿ ಮಳೆಯ ದರ್ಶನವಾಯಿತು. ಇಂದು ಮೋಡ ಕವಿದ ವಾತಾವರಣ ಇದ್ದು, ಸಂಜೆವರೆಗೆ ಮಳೆ ಹೀಗೆ ಸುರಿಯುವ ಲಕ್ಷಣ ಇದೆ.
ಮುಂದಿನ ಜುಲೈ ೧೭ರವರೆಗೆ ಬೆಂಗಳೂರಿನಾದ್ಯಂತ ವ್ಯಾಪಕ ಮಳೆ ಅಬ್ಬರ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮರ, ಕಂಬ ಮುರಿದು ಬಿದ್ದವು!
ಇನ್ನೊಂದು ಕಡೆ ಮಳೆಯ ಅಬ್ಬರಕ್ಕೆ ಮರಗಳು ಕೂಡ ಮುರಿದು ಬಿದ್ದವೆ. ಮರಗಳ ರೆಂಬೆ, ಕೊಂಬೆ ನೇರ ವಾಹನಗಳ ಮೇಲೆ ಬಿದ್ದಿವೆ.
ವಿದ್ಯುತ್ ಸಮಸ್ಯೆ…!
ವರ್ಷಧಾರೆಯಿಂದಾಗಿ ಕೆಲವೆಡೆ ಮರಗಳು ಧರೆಗುರುಳಿ ಬಿದ್ದವು. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಕಂಬಗಳು ಮುರಿದು ಬಿದ್ದು ಅವಾಂತರ ಸೃಷ್ಟಿಯಾಯಿತು. ಪರಿಣಾಮ, ಕೆಲ ಪ್ರದೇಶಗಳು ವಿದ್ಯುತ್ ಸಂಪರ್ಕ ಕಡಿತದಿಂದ ಕತ್ತಲೆಯಲ್ಲಿ ಮುಳುಗಿದವು.
ಎಲ್ಲೆಲ್ಲಿ ಮಳೆ?
ಜೆ.ಪಿ.ನಗರ, ಜಯನಗರ, ಹನುಮಂತನಗರ, ಗಿರಿನಗರ, ಹೆಬ್ಬಾಳ, ಮೆಜೆಸ್ಟಿಕ್, ಕಾಟನ್‌ಪೇಟೆ, ಯಲಹಂಕ, ಸಹಕಾರನಗರ, ಬೊಮ್ಮನಹಳ್ಳಿ, ಹೊರಮಾವು, ಕೆಂಗೇರಿ, ಗೊಟ್ಟಿಗೆರೆ, ಯಲಹಂಕ, ಕಮ್ಮನಹಳ್ಳಿ, ಬಾಣಸವಾಡಿ, ಕೋರಮಂಗಲ, ರಾಜಮಹಲ್ ಗುಟ್ಟಹಳ್ಳಿ, ಕೆಂಪೇಗೌಡ ನಗರ, ಕೊಟ್ಟಿಗೆಪಾಳ್ಯ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಮಳೆಯಾಗಿದೆ.