ಬೀದರ್‌ನಲ್ಲಿ ಲಘು ಭೂಕಂಪನ
(ಸಂಜೆವಾಣಿ ವಾರ್ತೆ)
ಬೀದರ್:ಆ.೧೧: ಜಿಲ್ಲೆಯಲ್ಲಿ ನಿನ್ನೆ ಭೂಕಂಪನವಾದ ಅನುಭವವಾಗಿದೆ. ಕೆಲವೇ ಸೆಕೆಂಡ್‌ಗಳು ಭೂಮಿ ಕಂಪಿಸಿದ್ದು, ಇದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಏSಓಆಒಅ)ದಲ್ಲಿ ದಾಖಲಾಗಿದೆ.
ಈ ಕುರಿತು ಕೇಂದ್ರದ ಯಲಹಂಕದಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಸೀತಲಗೇರಾ ಅವರನ್ನು ಕೇಂದ್ರವಾಗಿಟ್ಟುಕೊಂಡು ಭೂಕಂಪನವಾಗಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ ೨.೬ ಇತ್ತು. ಲಘು ಭೂಕಂಪವಾಗಿರುವುದರಿಂದ ಎಲ್ಲಿಯೂ ಯಾವುದೇ ಅನಾಹುತಗಳು ಆಗಿರುವ ವರದಿಗಳಾಗಿಲ್ಲ.ಕಂಪನದ ಅನುಭವದಿಂದ ಹುಮ್ನಾಬಾದ್ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಜನ ಭೀತಿಗೊಂಡು ಹೊರಗೆ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಅನುಭವವಾಯಿತು.
ಏನೂ ತೊಂದರೆಯಾಗಿಲ್ಲ ಎಂದು ಜನ ಮಾಹಿತಿ ನೀಡಿದ್ದಾರೆ.ಕಳೆದ ವರ್ಷ ನವೆಂಬರ್ ಹಾಗೂ ೨೦೨೪ರ ಮಾರ್ಚ್ ತಿಂಗಳಲ್ಲೂ ಇದೇ ರೀತಿ ಭೂಕಂಪನವಾದ ಅನುಭವವನ್ನು ಜಿಲ್ಲೆಯ ಜನ ಅನುಭವಿಸಿದ್ದರು.ಇದು ಕಡಿಮೆ ಪ್ರಮಾಣದ ಕಂಪನ. ಹಿಂದೆಯೂ ಈ ರೀತಿ ಆಗಿರುವ ಉದಾಹರಣೆಯಿದೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಕಂಪನದ ತೀವ್ರತೆ ಹೆಚ್ಚಾದರೆ ಮಾತ್ರ ಅನಾಹುತವಾಗಬಹುದು ಅಷ್ಟೇ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.