ಗುಂಡಿಕ್ಕಿ ರೌಡಿ ಡಕ್ಕ ಸೆರೆ
ಮಂಡ್ಯ,ಆ.೧೧- ಬಂಧಿಸಲು ಹೋದ ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾದ ಕೊಲೆ ಆರೋಪಿ ರೌಡಿ ಮುತ್ತುರಾಜ ಅಲಿಯಾಸ್ ಡಕ್ಕನಿಗೆ ಇಂದು ಬೆಳಿಗ್ಗೆ ಹಲಗೂರು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಗುಂಡೇಟು ಕಾಲಿಗೆ ತಗುಲಿ ಗಾಯಗೊಂಡಿರುವ ರೌಡಿ ಮುತ್ತುರಾಜ ಅಲಿಯಾಸ್ ಡಕ್ಕ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದ ಬಳಿ ಬೆಳಿಗ್ಗೆ ಖಚಿತವಾದ ಮಾಹಿತಿಯನ್ನು ಆಧರಿಸಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ರೌಡಿ ಡಕ್ಕನನ್ನು ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಡಕ್ಕ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಹಾರಿಸಿದ ಗುಂಡೇಟು ತಗುಲಿದ ರೌಡಿಶೀಟರ್ ಮುತ್ತುರಾಜ ಅಲಿಯಾಸ್ ಡಕ್ಕ ಸ್ಥಳದಲ್ಲಿ ಕುಸಿದುಬಿದ್ದಿದ್ದು,ಆತನನ್ನು ಬಂಧಿಸಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆ ಬಗ್ಗೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿ ಕಳೆದ ಜು.೩೦ರಂದು ನಡೆದ ಕಾಂತರಾಜು ಕೊಲೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಸಿಪಿಐ ಶ್ರೀಧರ್ ತನಿಖೆ ಕೈಗೆತ್ತಿಕೊಂಡಿದ್ದರು.
ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿತ್ತು. ತನಿಖೆ ವೇಳೆ ಕಾಂತರಾಜು ಕೊಲೆಗೆ ರೌಡಿಶೀಟರ್ ಡಕ್ಕ ಸುಪಾರಿ ನೀಡಿದ್ದಾಗಿ ಬಂಧಿತರು ಬಾಯ್ಬಿಟ್ಟಿದ್ದರು. ಮುತ್ತುರಾಜ್ ಸೂಚನೆ ಮೇರೆಗೆ ಕೊಲೆ ನಡೆಸಿರುವುದಾಗಿ ಅವರು ಹೇಳಿಕೆ ನೀಡಿದ್ದರು. ಹೀಗಾಗಿ ಸಿಪಿಐ ಶ್ರೀಧರ್ ಮತ್ತುವರ ತಂಡ ಡಕ್ಕನನ್ನು ಬಂಧಿಸಲು ಮುಂದಾಗಿತ್ತು. ಆತ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ಲಭಿಸಿ ಅಲ್ಲಿಗೆ ತೆರಳಿದ್ದರು.
ಬೈಕ್‌ನಲ್ಲಿ ತೆರಳುತ್ತಿದ್ದ ಡಕ್ಕನ್ನು ಹಿಡಿಯಲು ಸಿಪಿಐ ಶ್ರೀಧರ್ ಮತ್ತು ತಂಡ ಮುಂದಾಯಿತು. ಈ ವೇಳೆ ಬೈಕ್ ಬೀಳಿಸಿ ಆತ ಓಡಲು ಮುಂದಾಗಿದ್ದ. ತಡೆಯಲು ಮುಂದಾದ ಪೇದೆ ಮೇಲೆ ಡ್ರ್ಯಾಗನ್‌ನಿಂದ ಹಲ್ಲೆ ನಡೆಸಿದ್ದ.
ಏರ್‌ಫೈರ್ ವಾರ್ನಿಂಗ್‌ಗೂ ಡಕ್ಕ ಬಗ್ಗಿರಲಿಲ್ಲ. ಕೊನೆಗೆ ಸ್ವಯಂ ರಕ್ಷಣೆಗಾಗಿ ಸಿಪಿಐ ಶ್ರೀಧರ್ ಫೈರಿಂಗ್ ನಡೆಸಿದ್ದರು. ಈ ವೇಳೆ ಡಕ್ಕನ ಬಲಗಾಲಿಗೆ ಗುಂಡೇಟು ತಗುಲಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ರೌಡಿ ಡಕ್ಕ ೩ ಕೊಲೆ, ೩ ಕೊಲೆಗೆ ಯತ್ನ, ೨ ರಾಬರಿ ಪ್ರಕರಣ ಸೇರಿ ೧೧ ಪ್ರಕರಣ ದಾಖಲಾಗಿದೆ. ಗುಂಪು ಕಟ್ಟಿಕೊಂಡು ೨೦೧೯ರಿಂದಲೂ ಈತ ರೌಡಿ ಚಟುವಟಿಕೆಗಳನ್ನು ನಡೆಸುತ್ತಿದ್ದ. ಇಸ್ಪೀಟ್ ಆಡಿಸುವ ದಂಧೆಗೂ ಇಳಿದಿದ್ದ, ಡಕ್ಕನ ಗ್ಯಾಂಗ್ ಸದಸ್ಯರಿಗೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.