ಹಿಂದೂ ರಕ್ಷಣೆಗೆ ರಾಷ್ಟ್ರ ಜಾಗೃತಿ ಆಂದೋಲನ
ಬೆಂಗಳೂರು.ಆ.೧೧- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅಕ್ರಮಣಗಳನ್ನು ಖಂಡಿಸಿ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿತ್ತು, ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರಧರ್ಮ ಸಂಘಟನೆ, ರಾಷ್ಟ್ರ ರಕ್ಷಣಾ ಪಡೆ, ರಾಷ್ಟ್ರೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್, ಶ್ರೀರಾಮ ಸೇನೆ, ಫೌಂಡೇಶನ್ ಇಂಡಿಯಾ ಸೇರಿದಂತೆ ಸಮಸ್ತ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ ಇವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಅಲ್ಲಿನ ಪ್ರಧಾನಮಂತ್ರಿಯಾಗಿದ್ದ ಶೇಖ್ ಹಸೀನಾ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಈ ಸಂದರ್ಭದಲ್ಲಿ ಇಂದು ಇಡೀ ಬಾಂಗ್ಲಾದೇಶದಲ್ಲಿ ಅರಾಜಕತೆ ನಿರ್ಮಾಣವಾಗಿದೆ, ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಅಲ್ಲಿನ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
೨೦೨೪ರಲ್ಲಿ ಅದೇ ರೀತಿ ಹಿಂದೂಗಳ ಮೇಲಿನ ಆಕ್ರಮಣವು ಅತ್ಯಂತ ಅಪಾಯಕಾರಿಯಾಗಿದೆ. ದುರ್ದೈವವೆಂದರೆ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೈನ್‌ನಲ್ಲಿ ಏನಾದರೂ ಘಟಿಸಿದರೆ ಅದರ ಬಗ್ಗೆ ಇಂದು ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ, ಆದರೆ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿಯೆತ್ತುವುದಿಲ್ಲ, ಅಲ್ಪಸಂಖ್ಯಾತ ಹಿಂದೂಗಳು, ದಲಿತರ ಮೇಲೆ ದೌರ್ಜನ್ಯ ನಡೆದಿದ್ದರೂ ಸಹ ಯಾರೂ ಮಾತನಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಹಾಗಾಗಿ ಕೇಂದ್ರ ಸರಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಧಾವಿಸಬೇಕು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರಾಷ್ಟ್ರಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ, ರಾಷ್ಟ್ರೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ಕಾರ್ಯದರ್ಶಿಗಳಾದ ಡಾ. ಮಹೇಶ್ ಕುಮಾರ್ ಬಿ.ಎನ್, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ರಾಮಸೇನೆಯ ಎಸ್. ಭಾಸ್ಕರನ್, ಹಿಂದವೀ ಜಟ್ಕಾ ಮೀಟ್ ಸಂಸ್ಥಾಪಕರಾದ ಮುನೇಗೌಡ ಸೇರಿದಂತೆ ಹಲವಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.