ರೇಣುಕಾಸ್ವಾಮಿ ಕೊಲೆ ಶೀಘ್ರ ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು, ಆ.೧೧-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ.
ಪ್ರಕರಣದ ಸಂಬಂಧ ಸಾಕ್ಷ್ಯಗಳ ಒಟ್ಟುಗೂಡಿಸುವಿಕೆ,ತಂತ್ರಜ್ಞಾನ ಬಳಸಿ ಕಲೆಹಾಕಿರುವ ಕೊಲೆ ಸಂಬಂಧಿತ ಅಂಶಗಳು,ಕೊಲೆಯಲ್ಲಿ ಆರೋಪಿಗಳ ಪಾತ್ರ ಅವರ ವಿರುದ್ಧ ಇರುವ ಸಾಕ್ಷ್ಯಗಳು ಸೇರಿದಂತೆ ಎಲ್ಲವನ್ನೂ ಸವಿಸ್ತಾರವಾಗಿ ಚಾರ್ಜ್‌ಶೀಟ್‌ನಲ್ಲಿ ಸೇರಿಸಿದ್ದಾರೆ.
ದರ್ಶನ್ ಮತ್ತು ಗ್ಯಾಂಗ್‌ಗೆ ಸುಲಭದಲ್ಲಿ ಜಾಮೀನು ದೊರೆಯಬಾರದೆಂಬ ಕಾರಣಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ತಡ ಮಾಡುತ್ತಿದ್ದಾರೆ. ಸರಳ ಪ್ರಕರಣವಾದರೆ ಅಥವಾ ಒಬ್ಬರೊ ಇಬ್ಬರೊ ಆರೋಪಿಗಳಿದ್ದರೆ ಸಾಮಾನ್ಯವಾಗಿ ೩೦ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತದೆ. ಆದರೆ ಈ ಪ್ರಕರಣದಲ್ಲಿ ೧೭ ಆರೋಪಿಗಳಿದ್ದಾರೆ. ಕೊಲೆ ಆಗುವ ಕೆಲವು ದಿನಗಳ ಮುಂಚಿನಿಂದಲೂ ಯೋಜನೆ ರೂಪಿಸಲಾಗಿದೆ. ಕೊಲೆಯಾದ ಎರಡು ದಿನಗಳ ವರೆಗೆ ಹಲವು ಘಟನೆಗಳು ನಡೆದಿವೆ ಹಾಗಾಗಿ ಸಾಕ್ಷ್ಯ, ಮಹಜರು ಮಾಡಿರುವ ಸ್ಥಳಗಳ ಸಂಖ್ಯೆ ಎಲ್ಲ ಹೆಚ್ಚಿವೆ ಹಾಗಾಗಿ ಸಹಜವಾಗಿಯೇ ಚಾರ್ಜ್ ಶೀಟ್ ಸಲ್ಲಿಕೆ ತಡವಾಗುತ್ತಿದೆ.
ಚಿತ್ರದುರ್ಗ, ಬೆಂಗಳೂರು, ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಎಲ್ಲಾ ಸ್ಥಳಗಳ ಕೂಲಂಕುಶ ಪರಿಶೀಲನೆ ಆಗಬೇಕಿತ್ತು, ಸಾಕ್ಷಿ ಸಂಗ್ರಹಣೆ, ಸಾಕ್ಷಿಗಳ ವಿಚಾರಣೆ, ಎಫ್‌ಎಸ್‌ಎಲ್, ಬೆರಳಚ್ಚು ಪ್ರಿಂಟ್ ವರದಿ ಪಡೆದುಕೊಳ್ಳಬೇಕು, ಎಫ್‌ಎಸ್‌ಎಲ್ ವರದಿಗಳು ಬೇಗ ಪೊಲೀಸರ ಕೈಸೇರುವುದಿಲ್ಲ, ಮೊದಲದಿನದಿಂದ ಚಾರ್ಜ್ ಶೀಟ್ ಸಲ್ಲಿಕೆಯ ಕೊನೆ ದಿನದ ಸಾಕ್ಷಿಗಳು ತಾಳೆ ಆಗಬೇಕು, ಒಂದಕ್ಕೊಂದು ಪೂರಕ ಸಾಕ್ಷಿಗಳು ಇರಬೇಕು, ಸಂಶಯ ಮೂಡುವಂತ ಸಾಕ್ಷಿಗಳು ಕೂಡ ಇರಬಾರದು, ಕಾನೂನು ಅಡಿಯಲ್ಲಿ ಒಪ್ಪುವಂತಹ ಸಾಕ್ಷಿ ಇರಬೇಕು, ಇದರಿಂದಾಗಿ ಚಾರ್ಜ್ ಶೀಟ್ ಸಲ್ಲಿಕೆ ಹೆಚ್ಚು ದಿನ ತೆಗೆದುಕೊಳ್ಳುತ್ತಿದೆ.
ಇದೆಲ್ಲ ಆದರೂ ಸಹ ೯೦ ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧರಾಗಿದ್ದಾರೆ. ೯೦ ದಿನಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಸಿದರೆ ಜಾಮೀನು ಪಡೆದುಕೊಳ್ಳುವ ಹಪ-ಹಪಿಯಲ್ಲಿರುವ ದರ್ಶನ್ ಮತ್ತು ಗ್ಯಾಂಗ್‌ಗೆ ವರವಾಗಲಿದೆ. ಹಾಗಾಗಿ ಹೇಗಾದರೂ ಮಾಡಿ ೯೦ ದಿನಗಳ ಒಳಗಿಯೇ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧರಾಗಿದ್ದಾರೆ.
ಒಂದೊಮ್ಮೆ ವಿವರವಾದ ಚಾರ್ಜ್ ಶೀಟ್ ಸಲ್ಲಿಸಲು ೯೦ ದಿನಗಳಲ್ಲಿ ಸಲ್ಲಿಸಲು ಸಾಧ್ಯವಾಗದೇ ಇದ್ದರೆ, ಪ್ರಾಥಮಿಕ ಚಾರ್ಜ್ ಶೀಟ್ ಅನ್ನಾದರೂ ೯೦ ದಿನಗಳ ಒಳಗೆ ಸಲ್ಲಿಸಿ ಟ್ರಯಲ್ ಅನ್ನು ಆರಂಭಿಸುವ ಯೋಜನೆಯಲ್ಲಿದ್ದಾರೆ ಪೊಲೀಸರು. ಹೀಗೆ ಮಾಡುವುದರಿಂದ ದರ್ಶನ್ ಜಾಮೀನಿಗೆ ಅರ್ಜಿ ಹಾಕುವುದು ಕಷ್ಟವಾಗುತ್ತದೆ.
೯೦ ದಿನಗಳ ವರೆಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡದೇ ಇದ್ದರೆ ಅದೇ ಆಧಾರದ ಮೇಲೆ ದರ್ಶನ್ ಜಾಮೀನಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ ಪೊಲೀಸರು ೯೦ ದಿನಗಳಿಗೆ ಮುಂಚಿತವಾಗಿಯೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಜೂನ್ ೧೧ ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಇತರೆ ಆರೋಪಿಗಳ ಬಂಧನ ಆಗಿದೆ. ೧೪ ಆರೋಪಿಗಳು ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದು, ಅವರು ಮೂವರು ಅಪ್ರೂವರ್‌ಗಳಾಗಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಜೈಲಿನಲ್ಲಿ ೫೦ ದಿನ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾಗಿಯಾಗಿರುವ ನಟ ದರ್ಶನ್ ಜೈಲು ಪಾಲಾಗಿ ೫೦ ದಿನ ಕಳೆದಿವೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹ ಸೇರಿ ನಿನ್ನೆಗೆ ೫೦ ದಿನಗಳು ಕಳೆದಿವೆ. ಆದರೆ ಇದುವರೆಗೆ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ತನಿಖಾಧಿಕಾರಿಗಳು ಕೃತ್ಯ ನಡೆದ ೯೦ ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಈ ನಡುವೆ ಮನೆಯೂಟ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದ ದರ್ಶನ್‌ಗೆ ಮನೆಯೂಟ ಸವಿಯುವ ಭಾಗ್ಯ ಸಿಗಲಿಲ್ಲ. ಇನ್ನು ನಟ ದರ್ಶನ್ ಸೇರಿ ಪ್ರಕರಣದ ೧೭ ಆರೋಪಿಗಳೂ ಜೈಲಿನಲ್ಲಿದ್ದಾರೆ