ನಿರ್ಮಲಾ, ಕಟೀಲ್ ವಿರುದ್ಧದ ಎಫ್ಐಆರ್ ಗೆ ಮಧ್ಯಂತರ ತಡೆ
ಬೆಂಗಳೂರು: ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಮಾಡಿದ ಆರೋಪ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ನಾಯಕ ನಳಿನ್‌ ಕುಮಾರ್‌ ಕಟೀಲ್‌ ಸೇರಿ ಹಲವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಇದರಿಂದಾಗಿ ನಿರ್ಮಲಾ ಸೇರಿದಂತೆ ಬಿಜೆಪಿ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಿರ್ಮಲಾ ಸೇರಿದಂತೆ ಇತರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ, ಅ.22 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.
ನಳಿನ್ ಕುಮಾರ್ ಕಟೀಲು ಪರ ಕೆ.ಜಿ.ರಾಘವನ್ ವಾದ ಮಂಡನೆ ಮಾಡಿದ್ದು, ಸುಲಿಗೆ ವ್ಯಾಖ್ಯಾನದ ಸನಿಹದಲ್ಲೂ ಆರೋಪ ಬರುವುದಿಲ್ಲ. ಜಾರಿ ನಿರ್ದೇಶನಾಲಯವನ್ನೂ ಆರೋಪಿಯನ್ನಾಗಿ FIR ದಾಖಲಿಸಲಾಗಿದೆ ಎಂದರು.
ಇನ್ನು ದೂರುದಾರ ಆದರ್ಶ್ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ ಭೂಷಣ್ ವಾದ ಮಂಡಿಸಿದ್ದು, ಇಡಿ ಭಯದಲ್ಲಿ ರಾಜಕೀಯ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲಾಗಿದೆ. ಇದು ಸುಲಿಗೆ ಅಲ್ಲದೇ ಮತ್ತೇನೂ ಅಲ್ಲವೆಂದು ಹೇಳಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಸುಲಿಗೆ ಎಂದರೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರಬೇಕು. ಸುಲಿಗೆಗೆ ಒಳಗಾದವರೇ ಪೊಲೀಸರಿಗೆ ದೂರು ನೀಡಬೇಕು.
ಆದರೆ ದೂರುದಾರ ತಾವು ಸುಲಿಗೆಗೆ ಒಳಗಾಗಿದ್ದೇನೆಂದು ಹೇಳಿಲ್ಲ ಎಂದು ಅಭಿಪ್ರಾಯಪಟ್ಟರು.