ವಾಣಿಜ್ಯ ಸಿಲಿಂಡರ್ ೪೮.೫೦ಪೈಸೆ ದುಬಾರಿ
ನವದೆಹಲಿ,ಅ.೧:ತಿಂಗಳಾರಂಭದಲ್ಲಿ ವಾಣಿಜ್ಯ ಬಳಕೆ ೧೯ ಕೆಜಿಯ ಎಲ್‌ಪಿಜಿ ಸಿಲಿಂಡರ್ ದರವನ್ನು ೪೮.೫೦ಪೈಸೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ೫ ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್ ದರವನ್ನು ೧೨ ರೂ. ತೈಲ ಕಂಪನಿಗಳು ಏರಿಕೆ ಮಾಡಿದ್ದು, ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಅಡುಗೆ ಅನಿಲಗಳ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ. ಪ್ರಸ್ತುತ ೧೪ ಕೆಜಿ ಸಿಲಿಂಡರ್ ದರ ೮೦೩ ರೂ.ನಷ್ಟಿದೆ.
ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ, ನವರಾತ್ರಿ ಹಬ್ಬಗಳು ಸಮೀಪಿಸುತ್ತಿರುವ ಬೆನ್ನಲ್ಲೆ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಏರಿಕೆ ಮಾಡಿದೆ.
ಕಳೆದ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ೩೯ ರೂ.ಗೆ ಏರಿಕೆ ಮಾಡಿತ್ತು ತಿಂಗಳಾರಂಭದಲ್ಲಿ ತೈಲ ಕಂಪನಿಗಳು ಅನಿಲ ದರವನ್ನು ಪರಿಷ್ಕರಣೆ ಮಾಡಿದ್ದು, ಈಗ ಮತ್ತೆ ೪೮.೫೦ ಪೈಸೆಯಷ್ಟು ಏರಿಕೆಯಾಗಿದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೋಟೆಲ್ ಪದಾರ್ಥಗಳು ದುಬಾರಿಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯಿಂದಾಗಿ ಬೆಂಗಳೂರಿನಲ್ಲಿ ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ದರ ೧,೮೧೮ ಹಾಗೂ ರಾಜಧಾನಿ ದೆಹಲಿಯಲ್ಲಿ ೧,೭೪೦ ರೂ.ನಷ್ಟಿದೆ.